*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಪ್ರಕೃತಿಯ ಸಕಲ ಜೀವಜಾಲಗಳಲ್ಲಿಯೂ ದೇವರನ್ನು ಕಾಣುವ ಅಪರೂಪದ ಸಂಸ್ಕೃತಿ ನಮ್ಮದು.ಅದಕ್ಕೆ ಪೂರಕ ಎಂಬಂತೆ ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಆಚರಣೆಗೆ ಸಂಬಂಧಪಟ್ಟು ನದಿಯ ಮೀನುಗಳಿಗೆ ದಿನ ನಿತ್ಯ ಅಕ್ಕಿ ಸಮರ್ಪಿಸುವ ಅಪರೂಪದ ಆಚರಣೆ ಬುಧವಾರ ಆರಂಭಗೊಂಡಿತು. ಆಧುನಿಕ ಯುಗದಲ್ಲೂ ಮತ್ಸ್ಯವನ್ನು ಪೂಜ್ಯತಾ ಭಾವದಿಂದ ಆರಾಧಿಸಿ ಅಕ್ಕಿ ಅರ್ಪಿಸಿ ಭಕ್ತಿಪೂರ್ವಕ ಸಮರ್ಪಣೆಯ ಸಂಪ್ರದಾಯ ಇಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಪಯಸ್ವಿನಿ ನದಿಯಲ್ಲಿ ವಿಹರಿಸುವ ಮೀನುಗಳಿಗೆ ಅಕ್ಕಿ ಅರ್ಪಿಸುವ ಸಂಪ್ರದಾಯ
ಶ್ರಾವಣ ಮಾಸದ ಅಮವಾಸ್ಯೆಯಂದು ಆರಂಭಗೊಳ್ಳುತ್ತದೆ. ಮುಂದಿನ ಜನವರಿಯಲ್ಲಿ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಕೊಡಿ ಇಳಿಯುವ ದಿನದ ವರೆಗೆ ಸುಮಾರು ನಾಲ್ಕೂವರೆ ತಿಂಗಳು ನಿರಂತರವಾಗಿ ಈ ಆಚರಣೆ ಮುಂದುವರಿಯಲಿದೆ. ಶ್ರಾವಣ ಅಮವಾಸ್ಯೆಯ ದಿನ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು, ಬಲ್ಲಾಲ ಪ್ರತಿನಿಧಿಗಳು, ಅರ್ಚಕರು ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟವರು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಬೂಡು ನಾಲ್ಕುಸ್ಥಾನ ದೈವಗಳ ಚಾವಡಿಗೆ ಆಗಮಿಸುವರು.ಬಳಿಕ ಚಾವಡಿಯಲ್ಲಿ ದೀಪವಿಟ್ಟು, ಪ್ರಾರ್ಥನೆ ಸಲ್ಲಿಸಿ ನದೀ ತಟಕ್ಕೆ ಬರುತ್ತಾರೆ. ನದೀ ತಟದ ಕಲ್ಲಿನ ಮೇಲೆ ದೀಪ, ಸ್ವಸ್ತಿಕವಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಗಂಗಾ-ವರುಣ ಪೂಜೆ ನಡೆಸಿ ನೈವೇದ್ಯ ತಯಾರಿಸುತ್ತಾರೆ. ಬಳಿಕ ಎಲ್ಲರೂ ತೀರ್ಥಸ್ನಾನ ಮಾಡಿ ಒಟ್ಟಾಗಿ ಪ್ರಾರ್ಥನೆ ನಡೆಸಿ ಅಕ್ಕಿ, ಭತ್ತ, ತೆಂಗಿನ ಕಾಯಿಯ ಹೋಳು, ಬಾಳೆ ಹಣ್ಣು ಸೇರಿಸಿ ತಯಾರಿಸಿದ ನೈವೇದ್ಯ ಮತ್ತು ಹೂವು ಗಂಧದೊಂದಿಗೆ ಪ್ರಾರ್ಥನಾ ಪೂರ್ವಕ ಮತ್ಸ್ಯಗಳಿಗೆ ಅರ್ಪಿಸುವರು. ಚೆನ್ನಕೇಶವ ದೇವಸ್ಥಾನಕ್ಕೆ ಮತ್ತು ಬೂಡು ಭಗವತಿ ಕ್ಷೇತ್ರಕ್ಕೆ ಸಂಬಧ ಪಟ್ಟವರೆಲ್ಲರೂ ಉಪಸ್ಥಿತರಿರುತ್ತಾರೆ. ಸೀಮೆ ದೇವಸ್ಥಾನ ತೊಡಿಕಾನ ಶ್ರೀ ಮಲ್ಲಿಕಾಜುನ ದೇವಸ್ಥಾನದ
ಮತ್ಸ್ಯತೀರ್ಥದ ದೇವರ ಮೀನುಗಳು ಈ ನೈವೇದ್ಯವನ್ನು ಸ್ವೀಕರಿಸಲು ಇಲ್ಲಿಗೆ ಆಗಮಿಸುತ್ತವೆ ಎಂಬ ನಂಬಿಕೆಯಿದೆ. ಮುಂದೆ ಪ್ರತಿ ದಿನ ಪನ್ನೆಬೀಡು ಚಾವಡಿಗೆ ಸಂಬಂಧಿಸಿದ ಬಲ್ಲಾಳರ ಪ್ರತಿನಿಧಿ ಅಕ್ಕಿಯನ್ನು ನದಿಯ ಮೀನುಗಳಿಗೆ ಸಮರ್ಪಣೆ ಮಾಡುವ ಕಾರ್ಯವಮನ್ನು ಮುಂದುವರಿಸುತ್ತಾರೆ. ಮಧ್ಯಾಹ್ನ 12 ಗಂಟೆಗೆ ಮುನ್ನ ಚಾವಡಿಯಲ್ಲಿ ಪ್ರಾರ್ಥನೆ ಮಾಡಿ ನದಿಗೆ ಹೋಗಿ ಮೀನುಗಳಿಗೆ ಅಕ್ಕಿ ಹಾಕಿ ನದಿಯಲ್ಲಿ ಸ್ನಾನ ಮಾಡಿ ಬಂದು ಚಾವಡಿಯಲ್ಲಿ ದೀಪವಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಹಲವು ತಲಮಾರುಗಳಿಂದ ನಡೆಯುತ್ತಾ ಬಂದಿರುವ ಸಂಪ್ರದಾಯ.
ಪಯಸ್ವಿನಿ ತಟದಲ್ಲಿ ಇಂದು ಚೆನ್ನಕೇಶವ ದೇವಸ್ಥಾನದ ಅರ್ಚಕ ಹರಿಕೃಷ್ಣ ಭಟ್ ಕಾಯರ್ತೋಡಿ ಪುಜಾ ಕಾರ್ಯಗಳನ್ನು ನೆರವೇರಿಸಿದರು.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ತುದಿಯಡ್ಕ, ಬಳ್ಳಾಳ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ,ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯರಾದ ಬುದ್ಧ ನಾಯ್ಕ, ಸುಧಾಕರ ಕೇರ್ಪಳ, ಮಾಜಿ ಸದಸ್ಯ ಗೋಪಾಲ ನಡುಬೈಲು, ಪ್ರಮುಖರಾದ ನಾರಾಯಣ ರೈ, ಪ್ರಭಾಕರ ಮಡಿವಾಳ,ಮಹೇಶ್ ಕುಮಾರ್ ಮೇನಾಲ, ವಾಸುದೇವ ನಾಯಕ್, ಜಿನ್ನಪ್ಪ ಪೂಜಾರಿ, ಭಾಸ್ಕರ ರೈ, ಕುಸುಮಾಧರ ರೈ ಬೂಡು, ಪ್ರದೀಪ್ ರೈ ಬೂಡು, ಶುಭಾಶ್ ರೈ ಕುಕ್ಕಂದೂರು, ಯಶೂಧರ, ಸುಧಾಕರ ಬೂಡು, ಸತ್ಯಪ್ರಸಾದ್,ಮಾಯಿಲ ಬೂಡು, ದಿನಕರ ಕೇರ್ಪಳ, ಭಾಸ್ಕರ ರೈ ಮಿತ್ತೂರು, ರವಿಚಂದ್ರ ಕೇರ್ಪಳ,ವಿದಿತ್ ಬೂಡು, ರಾಜು ಪಂಡಿತ್, ಶಿವಪ್ರಸಾದ್ ರೈ ಬೂಡು, ಮಹಾಬಲ ರೈ ಬೂಡು ಮತ್ತಿತರರು ಉಪಸ್ಥಿತರಿದ್ದರು.