ನವದೆಹಲಿ:ಐಪಿಎಲ್ನ ಪ್ರಮುಖ ಬೆಳವಣಿಗೆಯಲ್ಲಿ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ.ಏಕ ಬಾರಿಯ ನಗದು ಪಾವತಿಯ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಅವರು ಈ ಹಿಂದೆ ಪ್ರತಿನಿಧಿಸಿದ್ದ ಮುಂಬೈ ತಂಡಕ್ಕೆ ಹಿಂದಿರುಗಿದ್ದಾರೆ. ಅವರು ಮರಳುವ ಬಗ್ಗೆ ಕೆಲವು ದಿನಗಳಿಂದ ಊಹಾ ಪೋಹಗಳು ಹರಡಿದ್ದವು. ಆದರೆ, ಗುಜರಾತ್ ಟೈಟಾನ್ಸ್ ತಂಡವು

ಭಾನುವಾರ ಪ್ರಕಟಿಸಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಪಾಂಡ್ಯ ಅವರ ಹೆಸರಿತ್ತು. ಹೀಗಾಗಿ, ತಂಡದಲ್ಲಿ ಮುಂದುವರಿಯುವಂತೆ ಕಂಡಿತ್ತು.ಆದರೆ, ತಡರಾತ್ರಿ ನಡೆದ ಈ ಬೆಳವಣಿಗೆಯಿಂದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ. ಮುಂಬೈ ತಂಡವು 2024ರ ಐಪಿಎಲ್ಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮುಂದುವರಿಸಿದೆ. ಐಪಿಎಲ್ ಮುಂದಿನ ಆವೃತ್ತಿಗೆ ಡಿಸೆಂಬರ್ 19ರಂದು ಬಿಡ್ಡಿಂಗ್ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಫ್ರಾಂಚೈಸಿಗಳು ಹಲವು ಆಟಗಾರರನ್ನು ಉಳಿಸಿಕೊಂಡು, ಮತ್ತೆ ಕೆಲವರನ್ನು ಬಿಡುಗಡೆ ಮಾಡಿವೆ
ಗುಜರಾತ್ ಟೈಟಾನ್ಸ್ ತಂಡದ ನೂತನ ನಾಯಕರಾಗಿ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿಂದಿರುಗಲು ಹಾರ್ದಿಕ್ ಪಾಂಡ್ಯ ನಿರ್ಧರಿಸಿದ ಬೆನ್ನಲ್ಲೇ ಗುಜರಾತ್ ಫ್ರಾಂಚೈಸಿಯಿಂದ ಈ ನಿರ್ಧಾರ ಹೊರಬಿದ್ದಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ 890 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ( 973) ನಂತರ ಐಪಿಎಲ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಖ್ಯಾತಿ ಹೊಂದಿರುವ ಗಿಲ್ ಅವರನ್ನು ಗುಜರಾತ್ ನಾಯಕನಾಗಿ ಆಯ್ಕೆ ಮಾಡಲಾಗಿದೆ.





