ಕೋಲ್ಕತಾ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳಿಗೆ ವಿಭಿನ್ನ ಕಾರಣಗಳಿಗಾಗಿ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.ವಿಶ್ವಕಪ್ನ ಸೆಮಿ ಫೈನಲ್ ಹಂತ ತಲುಪಬೇಕಾದರೆ ಪಾಕಿಸ್ತಾನ ಈ ಪಂದ್ಯವನ್ನು ಭಾರೀ ಅಂತರದಲ್ಲಿ ಗೆಲ್ಲಬೇಕಾಗಿದೆ. ಇಂಗ್ಲೆಂಡ್ ತಂಡವನ್ನು ಭಾರೀ
ಅಂತರದಿಂದ ಮಣಿಸಿ ಪವಾಡ ಮಾಡಿದರೆ ಪಾಕ್ ಸೆಮಿ ಫೈನಲ್ಗೆ ತಲುಪಬಹುದು.ಶ್ರೀಲಂಕಾದ ವಿರುದ್ಧ ನ್ಯೂಝಿಲ್ಯಾಂಡ್ 5 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಪಾಕಿಸ್ತಾನದ ಸೆಮಿ ಫೈನಲ್ ಹಾದಿ ಕಠಿಣವಾಗಿದೆ.ಇದೀಗ ಪಾಕಿಸ್ತಾನಕ್ಕೆ (+0.036) ಹೋಲಿಸಿದರೆ ನ್ಯೂಝಿಲ್ಯಾಂಡ್ (+743)ರನ್ರೇಟ್ ಶ್ರೇಷ್ಠಮಟ್ಟದಲ್ಲಿದೆ. ಬಾಬರ್ ಆಝಮ್ ಬಳಗ ನಾಲ್ಕನೇ ತಂಡವಾಗಿ ನಾಕೌಟ್ ಹಂತಕ್ಕೇರಬೇಕಾದರೆ ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್ ಅಂತರದಿಂದ ಜಯ ಸಾಧಿಸಬೇಕು. ಒಂದು ವೇಳೆ ರನ್ ಚೇಸಿಂಗ್ ಮಾಡಿದರೆ 284 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಬೇಕು. ಪ್ರಾಯೋಗಿಕವಾಗಿ ಇದು ಅಸಾಧ್ಯ ಎಂದೇ ಹೇಳಲಾಗಿದೆ. ಆದರೂ ಇದೀಗ ಫಾರ್ಮ್ಗೆ ಮರಳಿರುವ ಪಾಕಿಸ್ತಾನ ತಂಡದ ಅಭಿಮಾನಿಗಳು ಭರ್ಜರಿ ಗೆಲುವಿನ ನಿರೀಕ್ಷೆ ಇಟ್ಟಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸೆಮಿಫೈನಲ್ ಏರಲಾಗದೆ ಹೊರ ಬಿದ್ದಿದೆ. ಅಗ್ರ-8ರಲ್ಲಿ ಸ್ಥಾನ ಪಡೆದು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಪಡೆಯುವತ್ತ ಚಿತ್ತಹರಿಸಿದೆ. ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 160 ರನ್ ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್ ಐದು ಸೋಲಿನಿಂದ ಹೊರಬಂದು ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ.
ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಬಹುದು.









