ಅಬುಧಾಬಿ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ಮಂಗಳವಾರ ಶ್ರೀಲಂಕಾ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿತು. ಇದರೊಂದಿಗೆ ಲಂಕಾ ಪಡೆಯ ಫೈನಲ್ ಕನಸು ಬಹುತೇಕ ಕಮರಿದೆ. ಲಂಕಾ ನೀಡಿದ್ದ 134 ರನ್ಗಳ ಗುರಿ ಬೆನ್ನಟ್ಟಿದ ಪಾಕ್ ತಂಡ
18 ಓವರ್ಗಳಲ್ಲಿ 5 ವಿಕೆಟ್ಗೆ 138 ರನ್ ಗಳಿಸಿ ಸಂಭ್ರಮಿಸಿತು.ಸಾಹೀಬ್ ಝಾದ ಫರ್ಹಾನ್ (24;15ಎ) ಮತ್ತು ಫಕಾರ್ ಖಾನ್ (17;19) ಅವರು ಮೊದಲ ವಿಕೆಟ್ಗೆ 45 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 80 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರದಲ್ಲಿ ಹುಸೇನ್ ತಲತ್ (ಔಟಾಗದೇ 32;30ಎ) ಮತ್ತು ಮೊಹಮ್ಮದ್ ನವಾಜ್ (ಔಟಾಗದೇ 38;24ಎ) ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ದುಕೊಂಡಿತು. ಶಾಹಿನ್ ಶಾ ಅಫ್ರಿದಿ (28ಕ್ಕೆ3) ಅವರು ಆರಂಭ ಆಟಗಾರರ ವಿಕೆಟ್ಗಳನ್ನು ಬೇಗನೇ ಪಡೆದು ಪೆಟ್ಟು ನೀಡಿದರು. ಮಧ್ಯಮ ಹಂತದ ಓವರುಗಳಲ್ಲಿ ಹುಸೇನ್ ತಲತ್ (18ಕ್ಕೆ2) ಕಡಿವಾಣ ಹಾಕಿದರು.
ಅಬ್ರಾರ್ ಅಹ್ಮದ್ (4–0–8–1) ಅವರು ವೈವಿಧ್ಯಮಯ ಎಸೆತಗಳ ಮೂಲಕ ಲಂಕಾ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಕಮಿಂದು ಮೆಂಡಿಸ್ 44 ಎಸೆತಗಳಲ್ಲಿ 50 ರನ್ (4×3, 6×2) ಬಾರಿಸಿ ಪ್ರತಿರೋಧ ತೋರಿದರು. ಹೀಗಾಗಿ ತಂಡವು 8 ವಿಕೆಟ್ಗೆ 133 ರನ್ ಗಳಿಸಿತ್ತು.
ಸೂಪರ್ ಫೋರ್ ಹಂತದಲ್ಲಿ ಲಂಕಾ ತಂಡಕ್ಕೆ ಇದು ಸತತ ಎರಡನೇ ಸೋಲಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ಪರಾಭವಗೊಂಡಿತ್ತು. ಪಾಕ್ ತಂಡವು ಭಾರತ ವಿರುದ್ಧ ಸೋಲು ಕಂಡಿತ್ತು.





