ಸುಳ್ಯ:ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಶಾಸಕರ ಆಯ್ಕೆಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪದವೀಧರರು ಮತ್ತು ಶಿಕ್ಷಕರು ಮತದಾರರಾಗಿ ಹೆಸರು ನೋಂದಾಯಿಸಲು ಅವಕಾಶ ನೀಡಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.
ನೈರುತ್ಯ ಪದವೀಧರ ತ ಹಾಗೂ ಶಿಕ್ಷಕರ ಕ್ಷೇತ್ರದ ಮತ ಕ್ಷೇತ್ರದ
ಮತದಾರರ ಪಟ್ಟಿಯು ಹೊಸದಾಗಿ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಕೂಡ ಪದವೀಧರ ಕ್ಷೇತ್ರಕ್ಕೆ ನಮೂನೆ-18 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಕ ನಮೂನೆ-19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆ ದಿನಾಂಕವಾಗಿದೆ.ನ.23ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.ನ.23ರಿಂದ ಡಿ.9ರ ತನಕ ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ ನೀಡಲಾಗಿದ್ದು ಡಿ.30ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.
ಪದವೀಧರರ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನವೆಂಬರ್ 1, 2023ಕ್ಕೆ ತಮ್ಮ ಪದವಿಯನ್ನು ಪಡೆದ ನಂತರ ಮೂರು ವರ್ಷಗಳನ್ನು ಪೂರ್ಣಗೊಳಿಸಿರಬೇಕು. 2020ಕ್ಕಿಂತ ಮೊದಲು ಪದವಿ ಪಡೆದಿರುವವರು ನಮೂನೆ 18ರಲ್ಲಿ ಅರ್ಜಿಯೊಂದಿಗೆ ಉತ್ತೀರ್ಣರಾದ ಅಂಕಪಟ್ಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಹಾಗೂ ವಾಸ ಸ್ಥಳದ ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು..ವಕೀಲರು, ವೈದ್ಯರು, ಚಾರ್ಟಡ್್ರ ಅಕೌಂಟೆಂಟ್ ಹಾಗೂ ನೊಂದಾಯಿತ ಇಂಜಿನಿಯ ಸಂಘದ ಸದಸ್ಯರು ದೃಢಪಡಿಸಿದ ಪಟ್ಟಿ ಸಲ್ಲಿಸುವುದು.
ಮತದಾರರು ಆ ಕ್ಷೇತ್ರದ ನಿವಾಸಿಗಳಾಗಿರಬೇಕು. ಅರ್ಜಿದಾರರು ಸಂಬಂಧಿತ ದಾಖಲೆಗಳು ಮತ್ತು ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸುವುದು.ಅರ್ಹ ಪದವೀಧರರು ಮೂಲ ಪದವಿ ಪ್ರಮಾಣ ಪತ್ರ ಹಾಗೂ ಪ್ರತಿಯನ್ನು ಸ್ವಯಂ ದೃಢೀಕರಿಸಿಕೊಂಡು ಅರ್ಜಿಯೊಂದಿಗೆ ಸಲ್ಲಿಸಬೇಕು.ಅಂಚೆ ಮೂಲಕ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗುತ್ತಿದ್ದು ವಿಚಾರಣೆಗೆ ಹಾಜರಾಗದಿದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳಲಿವೆ.
ಶಿಕ್ಷಕರ ಕ್ಷೇತ್ರಕ್ಕೆ ಮತದಾರರಾಗಿ ಸೇರ್ಪಡೆಗೊಳ್ಳಲು ಬಯಸುವವರು ಮತ ಕ್ಷೇತ್ರದ ನಿವಾಸಿಯಾಗಿರಬೇಕು.ಕಳೆದ ಆರು ವರ್ಷಗಳಲ್ಲಿ (ನವೆಂಬರ್ 1, 2023ಕ್ಕೆ ಅನ್ವಯವಾಗುವಂತೆ)ಮೂರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು.ಆರು ವರ್ಷಗಳಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಬೋಧನಾ ನಿರತರಾಗಿರದ ವ್ಯಕ್ತಿಗಳು ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿಸಿರಬೇಕು.ಒಂದೇ ಕುಟುಂಬದ ಇತರೆ ಸದಸ್ಯರು ಸಮೂನೆ 19ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೂ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರ ಒದಗಿಸಬೇಕು.
ನೋಂದಣಾಧಿಕಾರಿಗಳ ನೇಮಕ: ಮತದಾರರ ಹೆಸರು ನೋಂದಾವಣೆಗೆ ಸಂಬಂಧಿಸಿದಂತೆ ಮೈಸೂರು ವಿಭಾಗದ ಆಯುಕ್ತರನ್ನು ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.ಕರ್ನಾಟಕ ನೈಋತ್ಯ ಕ್ಷೇತ್ರ ವ್ಯಾಪ್ತಿಗೊಳಪಡುವ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳನ್ನು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಶಿವಮೊಗ್ಗ ಹಾಗೂ ಆಯಾ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು ಹಾಗೂ ಎಲ್ಲಾ ವಿಭಾಗಗಳ ತಾಲೂಕುಗಳ ತಹಶೀಲ್ದಾರ್ರವರನ್ನು ಸಹಾಯಕ ಮತದಾರ ನೋಂದಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.ಪುತ್ತೂರು ಉಪ ವಿಭಾಗದ ಸಹಾಯಕ ಮತದಾರರ ನೋಂದಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಗಿರೀಶ್ ನಂದನ್, ಸಹಾಯಕ ನೋಂದಾವಣಾಧಿಕಾರಿಗಳಾಗಿ ಪುತ್ತೂರಿಗೆ ತಹಶೀಲ್ದಾರ್ ಶಿವಶಂಕರ್ ಹಾಗೂ ಕಡಬಕ್ಕೆ ತಹಶೀಲ್ದಾರ್ ಪ್ರಭಾಕರ ಖಜೂರೆ, ಬಂಟ್ವಾಳ ತಾಲೂಕಿಗೆ ತಹಶೀಲ್ದಾ ಎಸ್.ಬಿ ಕೂಡಲಗಿ, ಸುಳ್ಯ ತಾಲೂಕಿಗೆ ತಹಶೀಲ್ದಾರ್ ಮಂಜುನಾಥ ಅವರನ್ನು ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.