ಸಂಪಾಜೆ: ಅಪರಿಚಿತ ವಾಹನಗಳು ಡಿಕ್ಕಿ ಹೊಡೆದು ದನಗಳು, ನಾಯಿಗಳು, ಬೆಕ್ಕುಗಳು ಸೇರಿದಂತೆ ಸಾಕು ಪ್ರಾಣಿಗಳು ಸಾಯುವ ಹೃದಯ ವಿದ್ರಾಹಕ ಘಟನೆ ಸಂಪಾಜೆ ಭಾಗದಲ್ಲಿ ಪದೇ ಪದೇ ಕಂಡು ಬರುತ್ತದೆ. ಕಳೆದ ಕೆಲವು ದಿನಗಳಿಂದ ಸಂಪಾಜೆ, ಕಲ್ಲುಗುಂಡಿ ಭಾಗದಲ್ಲಿ ಹತ್ತಾರು ದನಗಳು ರಾತ್ರಿಯ ಸಮಯದಲ್ಲಿ ಸಿಡಿಲಿನಂತೆ ಓಡುವ ವಾಹನಗಳ
ವೇಗಕ್ಕೆ ಸಿಲುಕಿ ಬಲಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಸಂಪಾಜೆ ಗ್ರಾಮವೊಂದರಲ್ಲೇ 15 ಕ್ಕೂ ಹೆಚ್ಚು ಪ್ರಾಣಿಗಳು ಅಪರಿಚಿತ ವಾಹನಗಳು ಡಿಕ್ಕಿ ಹೊಡೆದು ಸತ್ತಿದೆ ಎನ್ನುತ್ತಾರೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್. ರಾತ್ರಿ ಹಗಲೆನ್ನದೆ ಸದಾ ವಾಹನ ನಿಬಿಡವಾಗಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಿಗೆ ದನಗಳನ್ನು ಮತ್ತು ಇತರ ಪ್ರಾಣಿಗಳನ್ನು ಎಗ್ಗಿಲ್ಲದೆ ಬಿಡುವ ಕಾರಣ ಈ ಮೂಕ ಪ್ರಾಣಿಗಳ ಮಾರಣ ಹೋಮ ನಡೆಯುತಿದೆ.ರಾತ್ರಿಯ ವೇಳೆ ಖಾಲಿ ಇರುವ ರಸ್ತೆಯಲ್ಲಿ ದೂರ ಪ್ರಯಾಣಿಸುವ ವಾಹನಗಳು ಶರವೇಗದಲ್ಲಿ ಓಡುತ್ತಿರುತ್ತವೆ. ಈ ಸಂದರ್ಭದಲ್ಲಿ ಈ ಪ್ರಾಣಿಗಳು ಅಡ್ಡ ಬಂದರೆ , ವೇಗವಾಗಿ ಬರುವ ಈ ವಾಹನಗಳು ಡಿಕ್ಕಿ ಹೊಡೆದಾಗ ಪ್ರಾಣಿಗಳ ದೇಹ ಛಿದ್ರ ಛಿದ್ರವಾಗಿ ಅವು ಪ್ರಾಣ ಬಿಡುತ್ತದೆ. ಈ ರೀತಿ ವಾಹನ ಡಿಕ್ಕಿಯಾಗಿ ಛಿದ್ರಗೊಂಡು ದನಗಳು ಸತ್ತಿರುವ ಭೀಭತ್ಸ ದೃಶ್ಯ ಮನ ಕಲಕುವಂತಿರುತ್ತದೆ. ರಾತ್ರಿಯ ವೇಳೆ ವೇಗವಾಗಿ ಚಲಿಸುವ ವಾಹನಗಳಿಗೆ
ಈ ರೀತಿ ರಸ್ತೆಯಲ್ಲಿ ತಿರುಗಾಡುವ ಪ್ರಾಣಿಗಳು ಸಿಲುಕಿ ಕೊಳ್ಳುತ್ತವೆ . ದ್ವಿಚಕ್ರ ವಾಹನ ಸವಾರರಿಗಂತೂ ಈ ದನಗಳು, ನಾಯಿಗಳು ಅಡ್ಡ ಬಂದು ಅಪಘಾತ ಸಂಭವಿಸುವುದೂ ಇದೆ. ಈ ರೀತಿ ವಾಹನಗಳು ಡಿಕ್ಕಿ ಹೊಡೆದು ಸತ್ತು ರಸ್ತೆಯಲ್ಲಿ ಬಿದ್ದಾಗ ಅವುಗಳನ್ನು ವಿಲೇವಾರಿ ಮಾಡುವುದು ಗ್ರಾಮ ಪಂಚಾಯತ್ಗೆ ದೊಡ್ಡ ತಲೆ ನೋವಾಗಿದೆ. ದನಗಳು ಸತ್ತರೆ ಅವುಗಳ ವಾರೀಸುದಾರರು ತಿರುಗಿ ನೋಡುವುದಿಲ್ಲ.
“ದನಗಳು, ನಾಯಿ, ಬೆಕ್ಕು ಸೇರಿದಂತೆ ಮೂಕ ಪ್ರಾಣಿಗಳನ್ನು ದಯ ಮಾಡಿ ಯಾರೂ ರಸ್ತೆಗೆ ಬಿಡಬಾರದು ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಮನವಿ ಮಾಡಿದ್ದಾರೆ. ಈ ರೀತಿ ಜಾನುವಾರುಗಳನ್ನು ರಸ್ತೆಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಬಿಡುವುದು ಕಂಡು ಬಂದರೆ ಅದರ ವಾರೀಸುದಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.