ಧರ್ಮಶಾಲ:ಈ ಬಾರಿಯ ಏಕದಿನ ವಿಶ್ವಕಪ್ ಕ್ರಿಕೆಟ್ ಹಲವು ಅಚ್ಚರಿಯ ಫಲಿತಾಂಶಗಳ ಮೂಲಕ ಗಮನ ಸೆಳೆದಿದೆ. ಎರಡು ದಿನ ಮೊದಲು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಪಘಾನಿಸ್ತಾನ ಗೆಲುವು ಸಾಧಿಸಿದ್ದರೆ ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲ್ಯಾಂಡ್ಸ್ ಸೋಲಿಸುವ ಮೂಲಕ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಧರ್ಮಶಾಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ಸಾಕ್ಷಿಯಾಯಿತು.ದಕ್ಷಿಣ ಆಫ್ರಿಕಾ ವಿರುದ್ಧ 38 ರನ್ಗಳಿಂದ ನೆದರ್ಲ್ಯಾಂಡ್ಸ್ ಗೆದ್ದು ಬೀಗಿತು. ಮಳೆಯಿಂದಾಗಿ 43 ಓವರ್ಗೆ ಇಳಿಸಿದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ 43 ಓವರ್ಗಳಲ್ಲಿ 8 ವಿಕೆಡ್ ನಷ್ಟಕ್ಕೆ 245 ರನ್ ಗಳಿಸಿತು.246 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 42.5 ಓವರ್ಗಳಲ್ಲಿ 207 ರನ್ಗೆ ಆಲೌಟಾಯಿತು.ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ 43 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಕೇಶವ ಮಹಾರಾಜ 40, ಹೆನ್ರಿ ಕ್ಲಾಸನ್ 28 ರನ್ ಬಾರಿಸಿದರು.
ಇದಕ್ಕೂ ಮುನ್ನ ನೆದರ್ಲ್ಯಾಂಡ್ಸ್ ಪರ ಏಕಾಂಗಿ ಜವಾಬ್ದಾರಿಯುತ ನಾಯಕನ ಆಟ ಆಡಿದ ಸ್ಕಾಟ್ ಎಡ್ವರ್ಡ್ಸ್ 10 ಬೌಂಡರಿ 1 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ತಂಡ 200 ರ ಗಡಿ ದಾಟುವಂತೆ ಮಾಡಿ ದಕ್ಷಿಣ ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ವಾನ್ ಡರ್ ಮಾರ್ವೆ ಉಪಯುಕ್ತ 29 ರನ್ ಗಳಿದರೆ ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರ್ಯನ್ ದತ್ ಸ್ಫೋಟಕ 23 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್, ಕಗಿಸೋ ರಬಡಾ ಹಾಗೂ ಲುಂಗಿ ಗಿಡಿ ತಲಾ 2 ವಿಕೆಟ್ ಪಡೆದರೆ ಜೆರಾಲ್ಡ್ ಮತ್ತು ಕೇಶವ್ ಮಹಾರಾಜ್ ಒಂದು ವಿಕೆಟ್ ಕಬಳಿಸಿದರು. ತಮ್ಮ ಮೊದಲ ವಿಶ್ವಕಪ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ನೆದರ್ಲ್ಯಾಂಡ್ಸ್ ಆಟಗಾರರು ವಿಶ್ವಕಪ್ ಗೆದ್ದಷ್ಟೇ ಸಂಭ್ರಮಿಸಿದರು
.