ಮುಕ್ಕೂರು: ಸಮಾಜದ ಆರೋಗ್ಯಪೂರ್ಣ ಪರಿವರ್ತನೆಯಲ್ಲಿ ಮುಕ್ಕೂರು ನೇಸರ ಯುವಕ ಮಂಡಲವೂ ತೊಡಗಿಸಿಕೊಂಡಿರುವ ಕಾರ್ಯಚಟುವಟಿಕೆಗಳು ಮಾದರಿಯಾದದು ಎಂದು ಜಿ.ಎಲ್. ಜುವೆಲ್ಲರ್ಸ್ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು.
ಮುಕ್ಕೂರು ನೇಸರ ಯುವಕ ಮಂಡಲದ ಹತ್ತನೇ ವರ್ಷಾಚರಣೆ ಪ್ರಯುಕ್ತ
ಶನಿವಾರ ರಾತ್ರಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ದಶಪ್ರಣತಿ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ನೇಸರ ಯುವಕ ಮಂಡಲದ ಕಾರ್ಯ ಚಟುವಟಿಕೆಗಳು ಅದ್ಭುತ ಪ್ರಯತ್ನ. ನೇಸರ ನಿಲಯ, ಉದ್ಯಾನವನ ನಿರ್ಮಾಣದಂತಹ ಕಾರ್ಯ ದಶ ದಿಕ್ಕಿಗೂ ಪ್ರೇರಣೆ ನೀಡುವಂತಹದು ಎಂದು ಶ್ಲಾಘಿಸಿದರು.
ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಸಮಾಜಮುಖಿ, ಸಾಂಸ್ಕೃತಿಕ ಚಿಂತನೆಗಳ ಜತೆಗೆ ಬದುಕಿಗೆ ಸಂಸ್ಕಾರ ನೀಡುವ ಸೇವಾ ಸಂಘವಾಗಿ ಬೆಳೆದಿರುವ ನೇಸರ ಯುವಕ ಮಂಡಲ ನನ್ನೂರಿನ ಸಂಘ ಎನ್ನಲು ನನಗೆ ಹೆಮ್ಮೆ ಎಂದೆನಿಸುತ್ತದೆ. ಸಾಮಾಜಿಕ ಚಿಂತನೆಯನ್ನು ಎಲ್ಲೆಡೆ ಬಿತ್ತಿದ ನೇಸರ ಸಂಘ ದಶ ವರ್ಷದಲ್ಲಿ ತೋರಿದ ಸಾಧನೆ ಜಿಲ್ಲೆಯ ಎಲ್ಲ ಯುವಕ ಸಂಘಗಳಿಗೆ ಮಾದರಿಯಾದದು ಎಂದರು.

ದಶಪ್ರಣತಿಯ ಮೂಲಕ. ಅಶಕ್ತ ಕುಟುಂಬದ ಕಣ್ಣೀರು ಒರೆಸುವ ಮಹತ್ವದ ಕಾರ್ಯವನ್ನು ಯುವಕ ಮಂಡಲದ ಮಾಡಿದೆ. ಒಂದು ಕುಟುಂಬಕ್ಕೆ ಬೆಳಕು ನೀಡುವಂತಹ ಮಹತ್ವದ ಕಾರ್ಯ ಸಂಘಟನೆಗಳ ಮೂಲಕ ಸಾಧ್ಯವಾಗುತ್ತಿರುವುದು ಶ್ಲಾಘನೀಯ. ಇಂತಹ ಸಂಘಟನೆಗಳಿಂದಲೇ ಭಾರತ ವಿಶ್ವ ಗುರುವಾಗಲು ಸಾಧ್ಯವಿದೆ ಎಂದು ನಳಿನ್ ಕಟೀಲು ಹೇಳಿದರು.
ಸಭಾಧ್ಯಕ್ಷತೆಯನ್ನು ಮುಕ್ಕೂರು ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ವಹಿಸಿದ್ದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ,
ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ,ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿದರು.

ವೇದಿಕೆಯಲ್ಲಿ ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು , ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನೇಸರ ನಿಲಯದ ಹಸ್ತಾಂತರದ ದ್ಯೋತಕವಾಗಿ ಆ ಕುಟುಂಬಕ್ಕೆ ಶ್ರೀ ಜಲದುರ್ಗಾದೇವಿಯ ಭಾವಚಿತ್ರ ನೀಡಲಾಯಿತು. ಹೊಸದಾಗಿ ರಚನೆಗೊಂಡ ನೇಸರ ಯುವತಿ ಮಂಡಲದ ಸದಸ್ಯರಿಗೆ ಸ್ವಾಗತ ಕೋರಲಾಯಿತು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಉಮೇಶ್ ಕೆಎಂಬಿ ವಂದಿಸಿದರು. ಪುಣ್ಯ ಶ್ರೀ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.












