ಸುಳ್ಯ: ಮೂರೂವರೆ ವರ್ಷಗಳ ಕಾಲ ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನವೀನ್ ಚಂದ್ರ ಜೋಗಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು. ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜೋಗಿ ಅವರನ್ನು ಸನ್ಮಾನಿಸಲಾಯಿತು. ಇಲಾಖೆಯ ವತಿಯಿಂದ, ವಿವಿಧ ಸಂಘ ಸಂಸ್ಥೆಗಳ
ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮತನಾಡಿದ ನವೀನ್ ಚಂದ್ರ ಜೋಗಿ ‘ಸಾರ್ವಜನಿಕರ ಸೇವೆ ನಮ್ಮ ಮೊದಲ ಕರ್ತವ್ಯ. ಬದುಕಿನಲ್ಲಿ ಕರ್ತವ್ಯಕ್ಕೆ ಮೊದಲ ಆದ್ಯತೆ. ಎಲ್ಲರ ಅತ್ಯುತ್ತಮ ಸಹಕಾರದಿಂದ ಸುಳ್ಯದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗದೆ ಎಂದು ಅವರು ಹೇಳಿದರು.ಜೀವನದ ಕೆಲವು ಘಟನೆಗಳು ಬದುಕಿಗೆ ತಿರುವು ನೀಡುತ್ತದೆ. ಅಂತಹಾ ಒಂದು ತಿರುವಿನಿಂದ ಪೊಲೀಸ್ ಇಲಾಖೆಗೆ ಸೇರುವಂತಾಯಿತು.ಜನರಿಗೆ ಸೇವೆ ಸಲ್ಲಿಸಲು ಇರುವ ಅತ್ಯಂತ ಉತ್ತಮ ಇಲಾಖೆ ಪೊಲೀಸ್ ಇಲಾಖೆ ಎಂದ ಅವರು ಪ್ರಮಾಣಿಕ ಕೆಲಸ ಮಾಡಿದರೆ ಜನರು ಮತ್ತು ದೇವರು ಮೆಚ್ಚುತ್ತಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ಮಾತನಾಡಿ ‘ ಯಾವುದೇ ಇಲಾಖೆಯಲ್ಲಿಯೂ ಉತ್ತಮ ಸೇವೆ ಮಾಡಿದಾಗ ಜನರು ಮೆಚ್ಚುತ್ತಾರೆ.ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ಜೋಗಿಯವರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಎಂತಹಾ ಸಂದಿಗ್ಧ ಸಂದರ್ಭಗಳಲ್ಲಿಯೂ ಸ್ಪೂರ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ನೂತನ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ ಅವರನ್ನು ಸ್ವಾಗತಿಸಲಾಯಿತು. ಸುಳ್ಯ ಎಸ್ಐ ಈರಯ್ಯ ದೂಂತೂರು, ಬೆಳ್ಳಾರೆ ಎಸ್ಐ ಅಶೋಕ್, ಸುಬ್ರಹ್ಮಣ್ಯ ಎಸ್ಐ ಕಾರ್ತಿಕ್, ವಿಟ್ಲ ಎಸ್ಐ ರತನ್ ಕುಮಾರ್, ನಿವೃತ್ತ ಎಸ್ಐ ನಾರಾಯಣ ರೈ, ನಿವೃತ್ತ ಎಎಸ್ಐ ಚಂದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಳ್ಯ ಎಸ್ಐ ಈರಯ್ಯ ದೂಂತೂರು ಸ್ವಾಗತಿಸಿದರು. ದೇವರಾಜ್ ಕೋಲ್ಚಾರ್ ವಂದಿಸಿದರು. ಭಾಸ್ಕರ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು.