ಸುಳ್ಯ: ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ದಿನ ಗಣನೆ ಆರಂಭಗೊಂಡಿದೆ. ದಿನ ಸಮೀಪಿಸುತ್ತಿದ್ದಂತೆ ಗ್ರಾಮೀಣ ಭಾಗದ ಜನಪ್ರಿಯ ಕಬಡ್ಡಿಯ ಹವಾ ನಿಧಾನಕ್ಕೆ ಹೆಚ್ಚುತಿದೆ.ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ

ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ. ಭಾಗವಹಿಸುವ ತಂಡಗಳು, ಕಬಡ್ಡಿ ಪಂದ್ಯಾಟದ ಮಾದರಿಯ ಚಿತ್ರಣ ಈ ರೀತಿ ಇರಲಿದೆ. ಅಂತಿಮ ಕ್ಷಣದ ಕೆಲವೊಂದು ಬದಲಾವಣೆ ಹೊರತು ಪಡಿಸಿ ಬಹುತೇಕ ಚಿತ್ರಣ ಸ್ಪಷ್ಟವಾಗಿದೆ. ರಾಷ್ಟ್ರೀಯ ಮಟ್ಟದ 12 ಪುರುಷ ತಂಡಗಳು, ನಾಲ್ಕು ಮಹಿಳಾ ತಂಡಗಳು ಭಾಗವಹಿಸಲಿದೆ.
ಪುರುಷ ವಿಭಾಗ:
ಪುರುಷರ ವಿಭಾಗದಲ್ಲಿ 12 ತಂಡಗಳು ಭಾಗವಹಿಸಲಿದ್ದು.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಲೀಗ್ ಹಂತದಲ್ಲಿ 3 ತಂಡಗಳಿರುವ 4 ಪೂಲ್ಗಳನ್ನು ರಚಿಸಲಾಗುವುದು. ಪೂಲ್ನ 3 ತಂಡಗಳು ಪರಸ್ಪರ ಸೆಣಸಲಿದ್ದು ಪ್ರತಿ ಪೂಲ್ನಿಂದ ಅತೀ ಹೆಚ್ಚು ಅಂಕ ಪಡೆದ ತಲಾ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಒಟ್ಟು ಎಂಟು ತಂಡಗಳ ಮಧ್ಯೆ ನಾಕ್ ಔಟ್ ಮಾದರಿಯಲ್ಲಿ ಕ್ವಾರ್ಟರ್ ಫೈನಲ್ ನಡೆದು ನಾಲ್ಕು ತಂಡ ಸೆಮಿ ಫೈನಲ್ನಲ್ಲಿ ಸೆಣಸಿ ಎರಡು ತಂಡ ಫೈನಲ್ ತಲುಪಲಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಹರಿಯಾಣ,ಮುಂಬೈ, ಹರಿಯಾಣ,ದೆಹಲಿಯ 4 ತಂಡಗಳು, ತಮಿಳುನಾಡಿನ ಎರಡು ತಂಡಗಳು ಸೇರಿ 12 ಪುರುಷರ ತಂಡಗಳು ಭಾಗವಹಿಸಲಿದೆ. ಪಂದ್ಯಾಟದ ಜೇತ ತಂಡಗಳಿಗೆ

ಪ್ರಥಮ ಬಹುಮಾನ 1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು.
ಮಹಿಳಾ ವಿಭಾಗ:
ಮಹಿಳಾ ವಿಭಾಗದಲ್ಲಿ 4 ತಂಡಗಳು ಭಾಗವಹಿಸಲಿದೆ. ಲೀಗ್ ಮಾದರಿಯಲ್ಲಿ ಪಂದ್ಯ ನಡೆದು ಅತೀ ಹೆಚ್ಚು ಅಂಕ ಪಡೆದ ಎರಡು ತಂಡಗಳು ಪೈನಲ್ ಪ್ರವೇಶ ಪಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮುಳುನಾಡು ರಾಜಸ್ಥಾನ ತಂಡಗಳು ಭಾಗವಹಿಸಲಿದೆ.
ಪ್ರಥಮ ಬಹುಮಾನ ರೂ.50 ಸಾವಿರ ಮತ್ತು ಟ್ರೋಫಿ, ದ್ವಿತೀಯ 30,000 ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ ತಲಾ 20,000 ಮತ್ತು ಟ್ರೋಫಿ ನೀಡಲಾಗುವುದು.
ಪಂದ್ಯಾಟವು ಸಂಪೂರ್ಣ ಪ್ರೊ ಮಾದರಿಯಲ್ಲಿ ಲೀಗ್ ಪಂದ್ಯಾಟ ನಡೆಯಲಿದ್ದು. ಪ್ರೊ ಕಬಡ್ಟಿಯಲ್ಲಿನ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು, ನಿಯಮಗಳನ್ನು ಅಳವಡಿಸಲಾಗುವುದು. ಪ್ರೊ ಕಬಡ್ಡಿ ತಂಡದ ಆಟಗಾರರು, ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ ಹಾಗೂ ಕಾರ್ಯದರ್ಶಿ ಗುರುದತ್ ನಾಯಕ್ ಹಾಗೂ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದ್ದಾರೆ.









