ಸುಳ್ಯ:ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಸುಳ್ಯದಲ್ಲಿ ಕಬಡ್ಡಿ ಉತ್ಸವ ರಂಗೇರಲಿದೆ. ಮೊದಲ ಬಾರಿಗೆ ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಕಬಡ್ಡಿ ಪ್ರಿಯರಿಗೆ 3 ದಿನಗಳ ಕಾಲ ಕಬಡ್ಡಿಯ ರಸದೌತಣವನ್ನೇ ಉಣ ಬಡಿಸಲಿದೆ. ಪ್ರೊ ಮಾದರಿಯ ಕಬಡ್ಡಿ ಪ್ರಥಮ ಬಾರಿಗೆ ಸುಳ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಪಂದ್ಯಾಟಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತಿದೆ. ಸುಸಜ್ಜಿತ ಇಂಡೋರ್ ಸ್ಟೇಡಿಯಂ ಸಿದ್ಧಗೊಂಡಿದೆ. ಸ್ಟೇಡಿಯಂ ಒಳಗೆ

ಗ್ಯಾಲರಿ ನಿರ್ಮಾಣ ಪೂರ್ತಿಗೊಂಡಿದೆ. 5 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ಕೆಲಸ ಮುಗಿದಿದೆ. ಈಗ ವೇದಿಕೆಯ ಕೆಲಸ, ಅಂಕಣದ ಕೆಲಸ ನಡೆಯುತಿದೆ. ಮ್ಯಾಟ್ ಅಳವಡಿಸುವ ಅಂಕಣದ ಕೆಲಸ ಅಂತಿಮ ಹಂತದಲ್ಲಿದೆ. ವಿಶಾಲವಾದ ಬೃಹತ್ ವೇದಿಕೆಯೂ ಸಿದ್ಧಗೊಳ್ಳುತಿದೆ. ಕಬಡ್ಡಿ ಪಂದ್ಯಾಟಕ್ಕೆ ಬೇಕಾದ ಬೆಳಕಿನ ಅಳವಡಿಸಲಾಗುತಿದೆ. ಕ್ರಿಡಾಂಗಣದ ಸುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ವರ್ಣ ವೈವಿಧ್ಯಗಳ ದೀಪಗಳ ಪ್ರಭೆಯಲ್ಲಿ ಕ್ರೀಡಾಂಗಣ ಕಂಗೊಳಿಸಲಿದೆ. ಕ್ರಿಡಾಂಗಣದ ಸುತ್ತ ರುಚಿಯ ವೈವಿಧ್ಯತೆ ಉಣ ಬಡಿಸಲು ಫುಡ್ ಸ್ಟಾಲ್ಗಳು ಇರಲಿದೆ. ಒಟ್ಟಿನಲ್ಲಿ 3 ದಿನಗಳ ಕಾಲ ರಾತ್ರಿಯನ್ನು ಹಗಲಾಗಿಸಿ ಕಬಡ್ಡಿಯ ವೈಭವ ರಂಗು ತರಲಿದೆ. ಸುಳ್ಯಕ್ಕೆ

ಸುಳ್ಯವೇ ಹಬ್ಬದ ವಾತಾವರಣದಲ್ಲಿ ಸಂಭ್ರಮಿಸಲಿದೆ.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ. ರಾಷ್ಟ್ರೀಯ ಮಟ್ಟದ 12. ಪುರುಷರ ತಂಡ ಹಾಗೂ 4 ಮಹಿಳಾ ತಂಡಗಳು ಭಾಗವಹಿಸಲಿದೆ.









