ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಜೊತೆ ನಾನೂ ರಾಜ್ಯದಲ್ಲಿ ಪ್ರವಾಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ನಿರ್ಗಮಿತ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ ಯುವ ಮೋರ್ಚಾ ಕಾರ್ಯ ವಿಸ್ತರಣೆ ಮಾಡಿದ
ಅವರು ಅತ್ಯುತ್ತಮ ಸಂಘಟಕರು, ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಅವರು ನಮ್ಮ ಜತೆ ರಾಜ್ಯದಲ್ಲಿ ಪ್ರವಾಸ ಮಾಡಿದ ಅನುಭವ ಇರುವವರು. ಉತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸುವ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿದೆ’ ಎಂದರು. ಅಧ್ಯಕ್ಷನಾಗಿ ಆಯ್ಕೆಯಾಗಿ ಇಡೀ ರಾಜ್ಯವನ್ನು 18 ಬಾರಿ ಸುತ್ತಿದ್ದೇನೆ. ಅನೇಕ ಚುನಾವಣೆಗಳು, ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಿರುವ ಬಗ್ಗೆ ತೃಪ್ತಿಯಿದೆ’ ಎಂದು ಪ್ರತಿಕ್ರಿಯಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಆಕ್ಷಾಂಕಿಯಾಗಿದ್ದಾರಾ ಎಂಬ ಪ್ರಶ್ನೆಗೆ ‘ಪಕ್ಷ ಹೇಳಿದ್ದನ್ನು ನಾನು ಮಾಡುತ್ತೇನೆ. ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದಾಗಿನಿಂದ ಇಷ್ಟರವರೆಗೆ ನಾನು ಆಕಾಂಕ್ಷಿಯಾಗಿ ಬಂದವನಲ್ಲ. ಪಕ್ಷ ಹೇಳಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದ್ದೇನೆ’ ಎಂದರು.









