ಸುಳ್ಯ:ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿಯವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಲ್ಯೂಮ್ನಿ ಎಸೋಸಿಯೇಷನ್ ವತಿಯಿಂದ 2023-24ನೇ ಸಾಲಿಗೆ ನೀಡುವ ಡಾ.ಜಿ.ಕೆ. ವೀರೇಶ್ ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ ದೊರೆತಿದೆ.ಏ.4ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ
ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಶಸ್ತಿ 25,000/ರೂ.ನಗದು ಬಹುಮಾನ ಒಳಗೊಂಡಿತು. ಪ್ರಶಸ್ತಿ ಪ್ರದಾನವನ್ನು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿ. ಗೋಪಾಲಗೌಡರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎನ್. ವಿ. ಸುರೇಶ್, ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ, ಕುಲಪತಿಗಳಾದ ಡಾ. ವಿಷ್ಣುವರ್ಧನ್ ಹಾಗೂ ಅಲ್ಯೂಮ್ನಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಎಚ್. ಎಲ್.ಹರೀಶ್ ರವರು ಉಪಸ್ಥಿತರಿದ್ದರು.