ಮುಕ್ಕೂರು:ಅಡಿಕೆ ಎಲೆಚುಕ್ಕಿ ರೋಗ ಹಲವಾರು ವರ್ಷಗಳಿಂದ ಕಾಡುತ್ತಿದೆ. ಕೆಲ ವರ್ಷಗಳಿಂದ ವಾತಾವರಣದಲ್ಲಿನ ಬದಲಾವಣೆ ಸಹಿತ ನಾನಾ ಕಾರಣಗಳಿಂದ ಅದರ ತೀವ್ರತೆ ಹೆಚ್ಚಾಗಿದೆ. ರೋಗ ಹರಡಲು ಕಾರಣವಾಗಿರುವ ಶಿಲೀಂದ್ರಗಳ ಬೀಜಾಣು ನಾಶಪಡಿಸುವಿಕೆ, ಕೀಟ ನಾಶಕ ಸಿಂಪಡಣೆಯ ಮೂಲಕ ರೋಗ ನಿಯಂತ್ರಣ ಸಾಧ್ಯವಿದೆ ಎಂದು
ವಿಟ್ಲ ಸಿಪಿಸಿಆರ್ ಐ ಹಿರಿಯ ವಿಜ್ಞಾನಿ ಡಾ.ನಾಗರಾಜ ಹೇಳಿದರು.
ಮುಕ್ಕೂರು ನೇಸರ ಯುವಕ ಮಂಡಲದ ಹತ್ತನೇ ವರ್ಷಾಚರಣೆ-ದಶಪ್ರಣತಿ ಪ್ರಯುಕ್ತ ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗುವ ಮೂಲಕ ಇದರ ರೋಗ ಲಕ್ಷಣವನ್ನು ಗಮನಿಸಬಹುದು. ರೋಗದ ತೀವ್ರತೆಯಿಂದ ಎಲೆಗಳು ಒಣಗಿ ಹೋಗುತ್ತಿದ್ದರೆ ಅವುಗಳನ್ನು ಕತ್ತರಿಸಿ ಸುಟ್ಟು ರೋಗ ಹರಡದಂತೆ ಎಚ್ಚರಿಕೆ ವಹಿಸಬಹುದು ಎಂದರು.
ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಮಾತನಾಡಿ ಕೃಷಿಯಲ್ಲಿ ಸಣ್ಣ ಕೃಷಿಕ, ದೊಡ್ಡ ಕೃಷಿಕ ಎಂಬ ಅಂತರ ಇಲ್ಲ. ಉತ್ತಮ ಕೃಷಿಯೇ ಎಲ್ಲರ ಗುರಿ. ಸಮಗ್ರ ಕೃಷಿ ಪದ್ಧತಿಯಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯವಿದೆ. ನಮ್ಮ ತಳಿಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ ನಮ್ಮ ತಳಿಗಳ ಬಗ್ಗೆ ಇತರರಿಗೆ ತಿಳಿಸಿ ಎಂದರು.

ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್ ಯದುಕುಮಾರ್ ಮಾತನಾಡಿ, ಅಡಿಕೆ ಅಥವಾ ಇನ್ನಿತ್ತರ ಕೃಷಿಗಳಿಗೆ ಸಂಬಂಧಿಸಿ ಕೃಷಿಕರಲ್ಲಿ ಸಮರ್ಪಕ ಮಾಹಿತಿ ಇರಬೇಕು. ಅವುಗಳ ಬೆಳವಣಿಗೆಗೆ, ಉತ್ತಮ ಫಸಲಿಗೆ ಯಾವುದು ಅನುಕೂಲ ಅನ್ನುವುದನ್ನು ಅರಿತಕೊಂಡು ಅದಕ್ಕೆ ತಕ್ಕ ಹಾಗೆ ಕೃಷಿಯನ್ನು ಮುನ್ನಡೆಸಿದರೆ ಅದರಿಂದ ಯಶಸ್ಸು ಸಿಗುತ್ತದೆ ಎಂದರು.
ಪ್ರಗತಿಪರ ಕಾಫಿ ಕೃಷಿಕ ಚಂದ್ರಶೇಖರ ತಾಳ್ತಜೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣ ಕಾಫಿ ಬೆಳೆಗೆ ಪೂರಕವಾಗಿ ಇದೆ. ಹೀಗಾಗಿ ಅಡಿಕೆಯ ಜತೆಗೆ ಉಪ ಬೆಳೆಯಾಗಿ ಇದನ್ನು ಬೆಳೆಸಬಹುದು. ಅಡಿಕೆ ತೋಟದ ನಡುವೆ ಕಾಫಿ ಬೆಳೆಯುವ ಸಂದರ್ಭದಲ್ಲಿ ಅಡಿಕೆ ಕೃಷಿಗೆ ಸ್ಪಿಂಕ್ಲರ್ ಮೂಲಕ ನೀರು ಹರಿಸುವಾಗ ಕಾಫಿ ಗಿಡದ ಹೂವುಗಳಿಗೆ ಹಾನಿ ಆಗದಂತೆ ಜಾಗರೂಕತೆ ವಹಿಸುವುದು ಸೂಕ್ತ ಎಂದರು.
ಬ್ಲೂಮ್ ಬಯೋಟೆಕ್ ಸಂಸ್ಥಾಪಕ ಸುಹಾಸ್ ಮೋಹನ್ ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕೆ ಶ್ವೇತಾ ಕಾನಾವು ಅವರು ತಾನು ಕಾಳುಮೆಣಸಿನಲ್ಲಿ ತಯಾರಿಸುತ್ತಿರುವ ಪಾನೀಯದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನಿ ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ವಹಿಸಿದ್ದರು.ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯೆ ರಾಜೀವಿ ಆರ್ ರೈ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಸ್ವಾಗತಿಸಿದರು. ನೇಸರ ದಶಪ್ರಣತಿ ಸಮಿತಿ ಸದಸ್ಯ ಜೈನುದ್ದೀನ್ ತೋಟದಮೂಲೆ ವಂದಿಸಿದರು. ಪುಣ್ಯಶ್ರೀ ಪ್ರಾರ್ಥಿಸಿದರು.ಕಾರ್ಯಕ್ರಮದ ಕೊನೆಯಲ್ಲಿಮೋಹನ ಬೈಪಡಿತ್ತಾಯ ಅವರ ತೋಟದಲ್ಲಿ ಕಾಫಿ ಗಿಡ ನೆಡಲಾಯಿತು.100 ಕ್ಕೂ ಅಧಿಕ ಮಂದಿ ಕೃಷಿಕರು ಪಾಲ್ಗೊಂಡಿದ್ದರು.












