ನವದೆಹಲಿ:ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಫ್ಎಸ್ಎಸ್ಎಐ ಸಂಸ್ಥೆಯು ಅಡಿಕೆಗೆ ನಿಗದಿಪಡಿಸಿರುವ ಈ
ತೇವಾಂಶ ಮಿತಿಯನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸಿರುವ ಸಂಸದರು, ಹೊಸದಿಲ್ಲಿಯಲ್ಲಿ ಸಚಿವರನ್ನು ಖುದ್ದು ಭೇಟಿಯಾಗಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಅಡಿಕೆ ಬೆಳಗಾರರರಿಗೆ ಆಹಾರ ಸುರಕ್ಷತಾ ಪ್ರಾಧಿಕಾರದ ಈ ರೀತಿಯ ತೇವಾಂಶ ಮಿತಿ ಹೇರಿಕೆಯು ಸಾಕಷ್ಟು ತೊಂದರೆಯುಂಟು ಮಾಡುತ್ತಿರುವುದನ್ನು ಮನವರಿಕೆ ಮಾಡಿದ್ದಾರೆ.
ದಕ್ಷಿಣ ಕನ್ನಡದ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಅಡಿಕೆ ಬೆಳೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಕ್ಯಾ. ಚೌಟ ಅವರು, ನಮ್ಮ ಪ್ರದೇಶದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು, ಸಹಕಾರ ಸಂಘಗಳು ಹಾಗೂ ಸ್ಥಳೀಯ ವರ್ತಕರು ತಮ್ಮ ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಎಫ್ಎಸ್ಎಸ್ಎಐನ ಮಾನದಂಡದಡಿಯಲ್ಲಿ ಅಡಿಕೆಯಲ್ಲಿರಬೇಕಾದ ಗರಿಷ್ಠ ತೇವಾಂಶದ ಪ್ರಮಾಣವನ್ನು ಶೇ.7ಕ್ಕೆ ನಿಗದಿಪಡಿಸಿರುವುದರಿಂದ ಅಡಿಕೆ ಬೆಳೆಗಾರರನ್ನು ಅಡಕತ್ತರಿಯಲ್ಲಿ ಸಿಲುಕಿಸುವಂತೆ ಮಾಡಿದೆ. ಕರಾವಳಿಯಂತಹ ಅತಿ ಹೆಚ್ಚು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಅಡಿಕೆಯನ್ನು ಪ್ರಮುಖವಾಗಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಇಂತಹ ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅಡಿಕೆ ತೇವಾಂಶದ ಮಟ್ಟವನ್ನು ಶೇ.11ಕ್ಕಿಂತ ಕಡಿಮೆ ಪ್ರಮಾಣಕ್ಕೆ ನಿಗದಿಪಡಿಸಿರುವುದರಿಂದ ರೈತರಿಗೆ ತೀವ್ರ ಸಮಸ್ಯೆ ಸೃಸ್ಟಿಸುತ್ತದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ಈ ರೀತಿಯ ಕಠಿಣ ನಿಯಮಗಳಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ತಿರಸ್ಕರಿಸುವುದು ಅಥವಾ ಕಡಿಮೆ ದರ್ಜೆಯದೆಂದು ಪರಿಗಣಿಸಲಾಗುತ್ತಿರುವುದರಿಂದ ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಭಾರೀ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ಯಕ್ಕೆ ಏಕರೂಪದ ಅಡಿಕೆ ತೇವಾಂಶ ಪರೀಕ್ಷಾ ವ್ಯವಸ್ಥೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಸದರು, ಸರಿಯಾದ ಅಡಿಕೆ ತೇವಾಂಶ ಪ್ರಮಾಣ ಪರೀಕ್ಷಾ ವ್ಯವಸ್ಥೆ ಇಲ್ಲದಿರುವುದರಿಂದ ಮನಬಂದಂತೆ ಬೆಲೆಯನ್ನು ನಿಗದಿ ಮಾಡಿ ರೈತರನ್ನು ಶೋಷಣೆಗೆ ಒಳಪಡಿಸುವ ಅಪಾಯವೂ ಇದೆ. ಅಲ್ಲದೆ ಅಡಿಕೆಯನ್ನು “ಹಣ್ಣು ಮತ್ತು ಬೀಜಗಳು” ವರ್ಗದಡಿ ಸೇರಿಸಿರುವುದು ಕೂಡ ತಾಂತ್ರಿಕವಾಗಿ ಸರಿಯಾದ ಕ್ರಮವಲ್ಲ. ಅದರಲ್ಲಿನ ಕಡಿಮೆ ಕೊಬ್ಬಿನ ಅಂಶ ಹಾಗೂ ಧಾನ್ಯ/ಬೇಳೆಗಳಿಗೆ ಹತ್ತಿರದ ಸ್ವಭಾವವನ್ನು ಗಮನಿಸಿದರೆ ಈ ರೀತಿಯ ಅವೈಜ್ಞಾನಿಕವಾದ ವರ್ಗೀಕರಣದ ಬಗ್ಗೆಯೂ ಮರುಪರಿಶೀಲನೆಗೆ ಒಳಪಡಬೇಕಾದ ಅಗತ್ಯೆಯಿದೆ ಎಂದು ಹೇಳಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಡಿಕೆಗೆ ಆಹಾರ ಸುರಕ್ಷತಾ ಪ್ರಾಧಿಕಾರವು ಅಡಿಕೆಗೆ ಈಗಾಗಲೇ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಶೇ.7ರಿಂದ ಶೇ.11ಕ್ಕೆ ಹೆಚ್ಚಿಸಬೇಕು. ಜತೆಗೆ ಅಡಿಕೆಯನ್ನು ಸರಿಯಾದ ಹಾಗೂ ವೈಜ್ಞಾನಿಕ ರೀತಿಯ ಬೆಳೆಗಳ ವರ್ಗೀಕರಣದ ಪಟ್ಟಿಯಲ್ಲಿ ಸೇರಿಸಬೇಕು. ಅಲ್ಲದೆ, ಅಡಿಕೆ ತೇವಾಂಶ ಪ್ರಮಾಣ ಪರೀಕ್ಷೆಗೂ ಸರಿಯಾದ ಹಾಗೂ ಪಾರದರ್ಶಕವಾದ ಮಾನದಂಡಗಳನ್ನು ರೂಪಿಸಬೇಕು. ಆ ಮೂಲಕ, ಅಡಿಕೆ ಬೆಳಗಾರರಿಗೆ ಬೆಳೆ ಕಟಾವು ನಂತರ ಅವುಗಳನ್ನು ಒಣಗಿಸಲು ಹಾಗೂ ದಾಸ್ತಾನು ಮಾಡುವುದಕ್ಕೆ ಹೆಚ್ಚು ವೈಜ್ಞಾನಿಕವಾದ ಮೂಲಸೌಕರ್ಯ ಕೂಡ ಒದಗಿಸಬೇಕೆಂದು ಕ್ಯಾ. ಚೌಟ ಅವರು ಸಚಿವ ಚಿರಾಗ್ ಪಾಸ್ವಾನ್ ಅವರನ್ನು ತಮ್ಮ ಭೇಟಿ ವೇಳೆ ಒತ್ತಾಯಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಎದುರಾಗಿರುವ ಈ ತೇವಾಂಶ ಮಿತಿ ನಿಗದಿ ಸಮಸ್ಯೆ ಮತ್ತು ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಕ್ಯಾ. ಚೌಟ ಅವರಿಗೆ ಭರವಸೆ ನೀಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿರುವ ಸಂಸದರು, ಅಡಿಕೆಗೆ ತೇವಾಂಶ ಮಿತಿಯನ್ನು ನಿಗದಿಪಡಿಸಿರುವುದರಿಂದ ರೈತರಿಗೆ ಎದುರಾಗಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ(ಎಫ್ಎಸ್ಎಸ್ಎಐ) ಉನ್ನತ ಮಟ್ಟದ ಅಧಿಕಾರಿಗಳನ್ನು ಕೂಡ ಭೇಟಿ ಮಾಡಲಾಗುವುದು. ಆ ಮೂಲಕ, ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಶೇ.7ರಿಂದ ಶೇ.11ಕ್ಕೆ ಹೆಚ್ಚಿಸಲು ಹಾಗೂ ಅಡಿಕೆ ಬೆಳೆಗಾರರಿಗೆ ತೇವಾಂಶ ಪರೀಕ್ಷೆಗೆ ಸರಿಯಾದ ಮಾನದಂಡ ಹಾಗೂ ತಪಾಸಣಾ ವ್ಯವಸ್ಥೆಯನ್ನು ರೂಪಿಸುವ ಬಗ್ಗೆಯೂ ಒತ್ತಾಯಿಸಲಾಗುವುದು ಎಂದು ಕ್ಯಾ. ಚೌಟ ತಿಳಿಸಿದ್ದಾರೆ.









