ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯಲಿದೆ. ಸುಳ್ಯ ತಾಲೂಕಿನಲ್ಲಿ ಒಟ್ಟು 26 ಮತಗಟ್ಟೆಗಳಿವೆ. ತಾಲೂಕಿನ 25 ಗ್ರಾಮ ಪಂಚಾಯತ್ಗಳಲ್ಲಿ ಮತ್ತು ಸುಳ್ಯ ನಗರ ಪಂಚಾಯತ್ನಲ್ಲಿ ಮತಗಟ್ಟೆ ಇರಲಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಶಾಸಕರು ಮತದಾರರಾಗಿರುವ
ಈ ಚುನಾವಣೆಯಲ್ಲಿ ಒಟ್ಟು 300 ಮತದಾರರು ಇದ್ದಾರೆ. 279 ಗ್ರಾಮ ಪಂಚಾಯತ್ ಸದಸ್ಯರು, 20 ನಗರ ಪಂಚಾಯತ್ ಸದಸ್ಯರು ಹಾಗೂ ಶಾಸಕರು ಈ ಚುನಾವಣೆಯಲ್ಲಿ ಮತದಾರರಿದ್ದಾರೆ.
ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಚುನಟವಣೆಗೆ ಸಿದ್ಧತೆಗಳು ಪೂರ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಮಸ್ಟರಿಂಗ್ ತಾಲೂಕು ಕಚೇರಿಯಲ್ಲಿ ಅ.20ರಂದು
ನಡೆಯಿತು. ಬ್ಯಾಲೆಟ್ ಮೂಲಕ ಮತದಾನ ನಡೆಯಲಿದೆ.
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6,032 ಮತದಾರರಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,552 ಹಾಗೂ ಉಡುಪಿ ಜಿಲ್ಲೆಯಲ್ಲಿ 2,480 ಮತದಾರರಿದ್ದಾರೆ
ಮತದಾರರು ಮತಗಟ್ಟೆಯಲ್ಲಿ ನೀಡುವ ನೇರಳೆ ಪೆನ್ನಿನಿಂದ ಮತಪತ್ರದಲ್ಲಿ ಪ್ರಾಶಸ್ತ್ಯ ಅನುಸಾರ ಮತ ಚಲಾಯಿಸಬೇಕು ಮೊದಲನೇ ಪ್ರಾಶಸ್ತ್ಯದ ಮತವನ್ನು ಯಾವ ಅಭ್ಯರ್ಥಿಗೆ ಚಲಾಯಿಸುತ್ತಿದ್ದಾರೆ ಎಂಬುದನ್ನು ಕ್ರಮ ಸಂಖ್ಯೆ “1” ಎಂದು ನಮೂದಿಸುವ ಮೂಲಕ ಮತ ಚಲಾಯಿಸಬೇಕು ಇಂಗ್ಲಿಷ್ ಕನ್ನಡ ಅಥವಾ ರೋಮನ್ ಅಂಕಿಯಲ್ಲಿ “1” ನಮೂದಿಸಬೇಕು. ಪ್ರಾಶಸ್ತ್ರವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1, 2, 3 ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು ಇದರ ಬದಲಾಗಿ ಒಂದು ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು ಎಂದು ಸೂಚನೆ ನೀಡಲಾಗಿದೆ. ಮತ ಚಲಾಯಿಸುವ ಉದ್ದೇಶಕ್ಕಾಗಿ ಮತಗಟ್ಟೆ ಅಧ್ಯಕ್ಷಾಧಿಕಾರಿಯವರು ಮತಪತ್ರದೊಡನೆ ನೀಡುವ ನೇರಳೆ ಬಣ್ಣದ ಪೆನ್ನನ್ನು ಮಾತ್ರ ಬಳಸಿ ಮತಚಲಾಯಿಸಲು ಅವಕಾಶವಿರುತ್ತದೆ. ಬೇರೆ ಇತರೇ ಯಾವುದೇ ಪೆನ್ನು ಅಥವಾ ಗುರುತು ಮಾಡುವ ಸಾಧನವನ್ನು ಬಳಸಿ ಮತ ಚಲಾಯಿಸಿದರೆ ಅಂತಃ ಮತಪತ್ರವನ್ನು ಅಸಿಂಧು ಪರಿಗಣಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರ ಸಭೆಗಳಲ್ಲಿ 64, 3 ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯತ್ ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತ್ ಗಳಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, 3 ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯತ್ ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.ಮತ ಎಣಿಕೆ ಮಂಗಳೂರು ಸಂತ ಅಲೋಷಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 24ರಂದು ನಡೆಯಲಿದೆ.