ಸುಳ್ಯ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ತಾಲೂಕು ಪಂಚಾಯತ್ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ಅರಂತೋಡು ಗ್ರಾಮದ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿ, ಅಡ್ತಲೆ ಪ್ರದೇಶದಲ್ಲಿ ನಿರಂತರವಾಗಿ ಆಗುತ್ತಿರುವ ಆನೆ ಹಾವಳಿಯಿಂದ ಅಡ್ತಲೆ ಭಾಗದಲ್ಲಿ
ಕೃಷಿಕರು, ಗ್ರಾಮಸ್ಥರು ಬದುಕು ನಡೆಸಲು ಆತಂಕಪಡುವಂತಾಗಿದ್ದು ಸಂಜೆಯಾಗುತ್ತಲೆ ಕಾಡಾನೆಗಳು ರಸ್ತೆಗೆ ಇಳಿದು, ಜನವಸತಿ ಪ್ರದೇಶಕ್ಕೆ ಬರುತ್ತಿವೆ, ಇತ್ತೀಚೆಗೆ ನಾವು ಸಮಾಲೋಚನಾ ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಂಡಿದ್ದೇವೆ, ಆದ್ದರಿಂದ ಆನೆ ಹಾವಳಿ ತಡೆಗಟ್ಟಲು, ಶಾಶ್ವತ ಪರಿಹಾರ ಕ್ರಮ ಯೋಜಿಸಲು ಶಾಸಕರ ನೇತೃತ್ವದಲ್ಲಿ ಅರಣ್ಯ ಇಲಾಖೆ ಜೊತೆಗೂಡಿ ಡಿಸಿಎಫ್, ಎಸಿಎಫ್ ಸಮ್ಮುಖದಲ್ಲಿ ಅಡ್ತಲೆಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಶಾಸಕರು ನಾಗರಿಕರೊಂದಿಗೆ ಮಾತನಾಡಿ, ಈ ಬಗ್ಗೆ ಇಲಾಖೆ ಜೊತೆಗೆ ಮಾತನಾಡಿ ಪೂರಕ ಕ್ರಮೈಗೊಳ್ಳುವ ಭರವಸೆ ನೀಡಿದರು.ಸುಳ್ಯದ ಅಮೃತಭವನದ ದುರಸ್ತಿ ಕಾರ್ಯ ಆರಂಭಿಸಲಾಗಿದ್ದು. ಅದರ ಅಭಿವೃದ್ಧಿಗೆ ಅನುದಾನ ನೀಡುವಂತೆ ಅಮೃತಭವನ ಅಭಿವೃದ್ಧಿ ಸಮಿತಿ ಪ್ರಮುಖರು ಶಾಸಕರಿಗೆ ಮನವಿ ಸಲ್ಲಿಸಿದರು. ಸವಣೂರು ಅಂಕತ್ತಡ್ಕ ಶಾಲಾ ಕೊಠಡಿಗೆ ಅನುದಾನ ನೀಡುವಂತೆ, ಚೆನ್ನಾವರ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನ ಒದಗಿಸುವಂತೆ, ಗಂಗಾ ಕಲ್ಯಾಣ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ, ವಿವಿಧ ಕಡೆಗಳ ರಸ್ತೆಗೆ, ಶಾಲಾ ಕೊಠಡಿಗೆ ಅನುದಾನ ಒದಗಿಸುವಂತೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.ಅಲ್ಲದೇ ಸಾರ್ವಜನಿಕ ರಸ್ತೆಯ ಕುರಿತಾಗಿಯು ಶಾಸಕಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಈ ಸಂಧರ್ಭದಲ್ಲಿ ಸರಕಾರಿ ಸಹಾಯಕ ಹರೀಶ್ ಆಪ್ತ ಸಹಾಯಕ ಪ್ರಸಾದ್ ಕಾಟೂರ್,ಪ್ರಮುಖರಾದ ಕೇಶವ ಅಡ್ತಲೆ, ಪ್ರವೀಣ್ ಚೆನ್ನಾವರ,ಮಹೇಶ್ ರೈ ಮೇನಾಲ,ಶಂಕರ ಪೆರಾಜೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.





