ಅರಂತೋಡು: ಆನೆಗಳು ಸೇರಿದಂದೆ ವನ್ಯ ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾಗಿರುವ ಆರಂತೋಡು- ತೋಡಿಕಾನ ಗ್ರಾಮದ ಕೃಷಿಕರು ಹಾಗೂ ಶಾಸಕರು ಮತ್ತು ಅರಣ್ಯಾಧಿಕಾರಿಗಳ ಸಂವಾದ ಕಾರ್ಯಕ್ರಮ ಅರಂತೋಡು ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ವನ್ಯ ಪ್ರಾಣಿಗಳ ಹಾವಳಿಯಿಂದ ಆಗಿರುವ ಹಾನಿಯ ಕುರಿತು ಕೃಷಿಕರು ಶಾಸಕರಿಗೆ
ವಿವರಿಸಿದರು. ಇದಕ್ಕೆ ಉತ್ತರಿಸಿದ ಶಾಸಕಿ ಭಾಗೀರಥಿ ಮುರುಳ್ಯ ವನ್ಯ ಪ್ರಾಣಿಗಳ ಹಾವಳಿ ತೀವ್ರಗೊಂಡಿದ್ದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಇದಕ್ಕೆ ಶಾಶ್ವತ ತಡೆ ಮಾಡಬೇಕು ಎಂದು ಸರಕಾರ ಹಾಗೂ ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ. ಅರಣ್ಯದಂಚಿನಲ್ಲಿ ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ವಿವಿಧ ತಡೆಗಳನ್ನು ಹೆಚ್ಚಾಗಿ ಅನುಷ್ಠಾನ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾತನಾಡಿ ಸುಳ್ಯ ಕ್ಷೇತ್ರ ಅರಣ್ಯದಿಂದ ಸುತ್ತುವರಿದ ಕಾರಣ ಆನೆ ಹಾಗೂ ಇತರ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರ ತಡೆಗೆ ಹಲವು ಯೋಜನೆಗಳನ್ನು ಅರಣ್ಯ ಇಲಾಖೆ ಅನುಷ್ಠಾನ ಮಾಡುತಿದೆ.ಅಲ್ಲದೆ ವನ್ಯಜೀವಿಗಳ ಹಾವಳಿಯಿಂದ ಕೃಷಿ ನಾಶ ಉಂಟಾದ ಕೃಷಿಕರಿಗೆ ಸರಕಾರಿ ಮಾನದಂಡದ ಪ್ರಕಾರ ಗರಿಷ್ಠ ಪರಿಹಾರ ನೀಡಲಾಗುತಿದೆ ಎಂದು ಹೇಳಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಅರಂತೋಡು
ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ಡಾ. ಲಕ್ಷ್ಮಿಶ , ಹಾಗೂ ಕೃಷಿಕರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸಿದರು.





