ಮಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ಕೆಲಸ ಕಾರ್ಯಗಳನ್ನು ಹರಿಸಿ ಬರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿ ನಿಯಮ ಅನುಸಾರ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಪೌರಾಡಳಿತ ಮತ್ತು ಹಜ್ ಸಚಿವ ರಾದ ರಹೀಮ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೆ.6ರ ಬುಧುವಾರ ರಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭಾಂಗಣದಲ್ಲಿ ನಡೆದ ಸ್ಥಳಿಯ ಸಂಸ್ಥೆಗಳ ಪ್ರಗತಿ
ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರೋತ್ತಾನ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ನಗರೋತ್ತಾನ ನಾಲ್ಕನೆಯ ಹಂತದ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ಅದನ್ನು ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಅನುಮತಿ ಪಡೆಯಲು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಒಂದೊಮ್ಮೆ ಅವುಗಳಲ್ಲಿ ತಿದ್ದುಪಡೆ ಇದ್ದಲ್ಲಿ ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿ ಕಳುಹಿಸಿ ಕೊಡಬೇಕು ಎಂದರು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಖುದ್ದಾಗಿ ಕಾಮಗಾರಿಗಳನ್ನು ಪರಿಶೀಲಿಸಿ ಬಿಲ್ ಮಾಡಲು ಅನುಮತಿ ನೀಡಬೇಕು ಎಂದರು.
ಬಡ ಜನರು ಹಸಿವೆಯಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲಾಗಿದೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಆಹಾರದ ಪದ್ಧತಿಯನ್ನು ಸ್ಥಳೀಯ ಪ್ರದೇಶದ ಅನುಗುಣವಾಗಿ ವಿತರಿಸಲು ಸೂಚಿಸಿ ಸಬ್ಸಿಡಿ ಹಣವನ್ನು ಸಹ ಹೆಚ್ಚಿಸಿದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನಿಗದಿತ ಪ್ರಮಾಣದಲ್ಲಿ ಆಹಾರವನ್ನು ವಿತರಿಸಬೇಕು ಎಂದರು.
ಕಳೆದ 5 ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಸರಿಯಾಗಿ ಆಗದೆ ಇರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ ಇವುಗಳ ದುರಸ್ತಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು . ರಾಜ್ಯದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಈ ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಜನರ ಸದುಪಯೋಗ ಆಗುವಂತಹ ಸ್ಥಳಗಳನ್ನು ಗುರುತಿಸಿ ಕ್ಯಾಂಟೀನ್ ಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಆಸ್ತಿ ತೆರಿಗೆಯಲ್ಲಿ ಹೊಸ ಶುಲ್ಕವನ್ನು ಸರ್ಕಾರ ಜಾರಿಗೆ ತಂದಿದೆ ಇದನ್ನು ಅನುಷ್ಠಾಗೊಳಿಸಬೇಕು ನೀರಿನ ಶುಲ್ಕ ಸಂಗ್ರಹದ ಪ್ರಗತಿ ಇನ್ನು ಹೆಚ್ಚು ಸಾಧಿಸಬೇಕು. ಆನ್ ಲೈನ್ ತೆರಿಗೆ ಸಂಗ್ರಹಕ್ಕೆ ಹೆಚ್ಚು ಹೊತ್ತು ನೀಡಬೇಕು ನಿಗದಿತ ತೆರಿಗೆ ಸಂಗ್ರಹವಾಗದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯಥ್ಯಯ ವಾಗುವ ಸಾಧ್ಯತೆ ಇದೆ. ಈಗಿನಿಂದಲೇ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ನೀರಿನ ಮಿತಿ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ತಪ್ಪಿದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಸಂಗ್ರಹ ಸಂದರ್ಭದಲ್ಲಿ ಬೇರ್ಪಡಿಸಿ ಸಂಗ್ರಹಿಸಿದ ಒಣ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ನೀಡಿದಲ್ಲಿ ಹಾಗೂ ಹಸಿ ಕಸದಿಂದ ಗೊಬ್ಬರ ತಯಾರಿಕೆ ಮಾಡಿದಲ್ಲಿ ಸಂಘ ಸಂಸ್ಥೆಗಳಿಗೆ ಆದಾಯ ಸಿಗುತ್ತದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.15ನೇ ಹಣಕಾಸು ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದ ಅವರು
ವ್ಯಾಪಾರ ಪರವಾನಿಗೆಯನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕು ಕೆಲವು ಐದು ವರ್ಷಗಳಿಗೆ ನವೀಕರಿಸಲು ಅವಕಾಶವಿದೆ. ಆನ್ಲೈನ್ ಪೋರ್ಟಲ್ ನಲ್ಲಿಯೂ ನವೀಕರಿಸಬಹುದಾಗಿದೆ ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಎಂದ ಅವರು ಜಾಹೀರಾತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಪ್ರದರ್ಶಿಸಲು ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ನಿರ್ಣಯವನ್ನು ಕೈಗೊಂಡು ನಿಯಮವನ್ನು ರೂಪಿಸಿಕೊಳ್ಳಬೇಕು ಒಂದೊಮ್ಮೆ ಅನುಮತಿ ತೆಗೆದುಕೊಳ್ಳದೆ ಜಾಹೀರಾತುಗಳನ್ನು ಪ್ರದರ್ಶಿಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.
ಪೌರಾಡಳಿತ ಇಲಾಖೆಯ ನಿರ್ದೇಶಕಿ ಮಂಜುಳಾಶ್ರೀ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಹಾಗೂ ಮಂಗಳೂರು ಡಿಯುಡಿಸಿ ಯೋಜನಾ ನಿರ್ದೇಶಕರಾದ ಅಭಿಷೇಕ ವಿ.ಎಸ್. ಉಪಸ್ಥಿತರಿದ್ದರು.