ಜೈಪುರ: ಬ್ಯಾಟರ್ಗಳ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 100ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ಗಳಲ್ಲಿ 217 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ರಾಯಲ್ಸ್, ಮುಂಬೈ ಬೌಲರ್ಗಳ
ಸಂಘಟಿತ ದಾಳಿಯ ಮುಂದೆ ನಲುಗಿ 16.1 ಓವರ್ಗಳಲ್ಲಿ 117 ರನ್ಗಳಿಗೆ ಆಲ್ ಔಟ್ ಆಯಿತು. ರಾಯಲ್ಸ್ ಪರ ಯಾವುದೇ ಬ್ಯಾಟರ್ಗಳು ಉತ್ತಮ ಮೊತ್ತ ಪೇರಿಸಲು ವಿಫಲರಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟ್ ಆದರು. ಯಶಸ್ವಿ ಜೈಸ್ವಾಲ್(13), ನಿತೀಶ್ ರಾಣ(9), ರಿಯಾನ್ ಪರಾಗ್(16), ಧ್ರುವ್ ಜುರೆಲ್(11) ವಿಫಲರಾದರು. 30 ರನ್ ಗಳಿಸಿದ ಜೋಪ್ರಾ ಆರ್ಚರ್ ಟಾಪ್ ಸ್ಕೋರರ್ ಆದರು. ಮುಂಬೈ ಪರ ಕರಣ್ ಶರ್ಮ ಟ್ರಂಟ್ ಬೋಲ್ಟ್ ತಲಾ 3 ವಿಕೆಟ್, ಜಸ್ಪ್ರೀತ್ ಬುಮ್ರಾ 2 ವಿಕೆಟ್, ದೀಪಕ್ ಚಹಾರ್, ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ಪರ ಆರಂಭಿಕರಾದ ರೋಹಿತ್ ಶರ್ಮಾ (53, 36 ಎಸೆತ 4×9) ಮತ್ತು ರಿಯಾನ್ ರಿಕೆಲ್ಟನ್ (61, 38 ಎಸೆತ 4×7, 6×3) ಅವರು ಬಿರುಸಿನ ಅರ್ಧಶತಕ ಸಿಡಿಸಿದರು. ರೋಹಿತ್ ಮತ್ತು ರಿಕೆಲ್ಟನ್ ಅವರು ಮೊದಲ ವಿಕೆಟ್ಗೆ 116 ರನ್ಗಳ ಭದ್ರ ಅಡಿಪಾಯ ಹಾಕಿದರು. ರೋಹಿತ್ ಮತ್ತು ರಿಕೆಲ್ಟನ್ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು.
ನಂತರ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರೂ ಮಿಂಚಿನ ಆಟವಾಡಿ ರಾಯಲ್ಸ್ ತಂಡವನ್ನು ಮತ್ತಷ್ಟು ಒತ್ತಡಕ್ಕೆ ತಳ್ಳಿದರು. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ ಅಜೇಯ 48 ರನ್(4×4 6×3) ಹೊಡೆದರೆ, ಹಾರ್ದಿಕ್ 23 ಎಸೆತಗಳಲ್ಲಿ 48 ರನ್ (4×6, 6×1) ಬಾರಿಸಿ ಔಟಾಗದೇ ಉಳಿದು ಮೊತ್ತವನ್ನು ಸುಲಭವಾಗಿ 200ರ ಗಡಿ ದಾಟಿಸಿದರು. ಸೂರ್ಯ ಮತ್ತು ಹಾರ್ದಿಕ್ ಮುರಿಯದ ಮೂರನೇ ವಿಕೆಟ್ಗೆ 94 ರನ್ ಸೇರಿಸಿದರು. ಕೊನೆಯ ಐದು ಓವರುಗಳಲ್ಲಿ ಇವರಿಬ್ಬರು 71 ರನ್ಗಳನ್ನು ಸೂರೆ ಮಾಡಿದರು.





