ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದೆ .ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆಶ್ವಿನಿ ಕುಮಾರ್ ಅವರ ಮಾರಕ ದಾಳಿಗೆ ಕುಸಿದು 16.2 ಓವರ್ಗಳಲ್ಲಿ 116 ರನ್ ಗಳಿಸಿ ಆಲೌಟ್ ಆಯಿತು.ಗುರಿ ಬೆನ್ನತ್ತಿದ್ದ
ಮುಂಬೈ 12.5 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ರಿಕೆಲ್ಟನ್ 41 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೇವಲ 9 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಚಚ್ಚಿದರು. ಕೊನೆಯಲ್ಲಿ ರಸೆಲ್ ಬೌಲಿಗೆ ಸೂರ್ಯ ಕುಮಾರ್ ಯಾದವ್ ಅದ್ಭುತ ಸಿಕ್ಸ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿದರು.ಇದಕ್ಕೂ ಮುನ್ನ ಮುಂಬೈ ಬಿಗು ದಾಳಿಗೆ ಕುಸಿದ ಕೆಕೆಆರ್ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಯಿತು. 26 ರನ್ ಗಳಿಸಿದ ರಘುವಂಶಿ ಟಾಪ್ ಸ್ಕೋರರ್ ಆದರು. ಮುಂಬೈ ಪರ ಅಶ್ವಿನಿಕುಮಾರ್ 4 ವಿಕೆಟ್ ಕಿತ್ತರೆ ದೀಪಕ್ ಚಾಹರ್ ಎರಡು ವಿಕೆಟ್ ಪಡೆದರು. ಟ್ರೆಂಟ್ ಬೋಳ್ಟ್, ಹಾರ್ದಿಕ್ ಪಾಂಡ್ಯ, ವಿಘ್ನೇಶ್ ಪುತ್ತೂರು, ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಪ್ರಸ್ತಕ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಇತ್ತ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡವು ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 7 ವಿಕೆಟ್ ಅಂತರದಿಂದ ಸೋಲು ಅನುಭವಿಸಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು. ಇಂದು ಮುಂಬೈ ವಿರುದ್ಧ ಸೋಲನುಭವಿಸಿದೆ.