ಸುಳ್ಯ:ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಆಗಿ ಶಿಲಾನ್ಯಾಸ ಆಗಿದ್ದರೂ ಸುಳ್ಯದ ಬಹು ನಿರೀಕ್ಷಿತ 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಯಾಕೆ ಆರಂಭ ಆಗಿಲ್ಲ ಎಂದು ಸುಳ್ಯದ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರೆ, ಕಾಮಗಾರಿ ಆರಂಭಕ್ಕೆ ಸರಕಾರಿ ಮಟ್ಟದಲ್ಲಿ ವಿಳಂಬ ಆಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ಉತ್ತರಿಸಿದ ಪ್ರಸಂಗ ಸುಳ್ಯ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ನಡೆಯಿತು. ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪವಿಭಾಗದ ಮೆಸ್ಕಾಂ ಜನ ಸಂಪರ್ಕ ಸಭೆ ಸುಳ್ಯ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಸೆ.15ರಂದು ನಡೆಯಿತು. ಸುಳ್ಯದ 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ
ಟೆಂಡರ್ ಆಗಿ ಹಿಂದಿನ ಸರಕಾರದ ಅವಧಿಯಲ್ಲಿ ಕಾಮಗಾರಿ ಶಿಲಾನ್ಯಾಸ ಆಗಿದ್ದರೂ ಕಾಮಗಾರಿ ಯಾಕೆ ಆರಂಭ ಆಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಪ್ರಶ್ನಿಸಿದರು.110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಟೆಂಡರ್ ಆಗಿ ಶಿಲಾನ್ಯಾಸ ಆಗಿತ್ತು. ಆದರೆ ಹೊಸ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಹಿಂದಿನ ಸರಕಾರದ ಕೊನೆಯ ಅವಧಿಯಲ್ಲಿ ಉದ್ಘಾಟನೆಯಾದ ಕೆಲವು ಕಾಮಗಾರಿಗಳ ಕೆಲಸ ಆರಂಭ ಆಗಿಲ್ಲ ಈ ಪಟ್ಟಿಯಲ್ಲಿ ಸುಳ್ಯದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಸೇರಿದೆ. ಆದುದರಿಂದ 110 ಕೆ.ವಿ. ಸಬ್ ಸ್ಟೇಷನ್ ಕಾಮಗಾರಿ ಆರಂಭ ಆಗಿಲ್ಲ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಸುಳ್ಯದಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರ ಸ್ಪಾಪನೆ ಕಾಮಗಾರಿಯು ಕೆಪಿಟಿಸಿಎಲ್ ವತಿಯಿಂದ ನಿರ್ವಹಿಸಲಾಗುತ್ತಿದ್ದು ಈ ಬಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ 110 ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ಕೆಪಿಟಿಸಿಎಲ್ ವತಿಯಿಂದ ಶೀಘ್ರವಾಗಿ ನಿರ್ವಹಿಸಲು ಹಾಗೂ ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಸರಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ ಮಾಡಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಮೆಸ್ಕಾಂ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಉತ್ತರಿಸಿದರು. ಕಾಮಗಾರಿ ಆರಂಭಕ್ಕೆ ಅನುಮತಿಗೆ ಪ್ರಯತ್ನ ನಡೆಯುತಿದೆ ಎಂದು ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತಂದು ಕಾಮಗಾರಿ ಆರಂಭಕ್ಕೆ ಪ್ರಯತ್ನ ನಡೆಸಲಾಗುವುದು.15 ದಿನದಲ್ಲಿ ಸಚಿವರು ಸುಳ್ಯಕ್ಕೆ ಬರುವ ನಿರೀಕ್ಷೆ ಇದೆ ಎಂದು ಪಿ.ಎಸ್.ಗಂಗಾಧರ ಹೇಳಿದರು.
ರಸ್ತೆ, ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತದೆ. ಕೆಲವೊಮ್ಮೆ ವಾಹನಗಳ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಿದ್ಯುತ್ ಕಂಬ ಹಾನಿಗೊಂಡಲ್ಲಿ ವಾಹನ ಚಾಲಕರಿಂದ 20 ಸಾವಿರದವರೆಗೆ ಹಣ ವಸೂಲಿ ಮಾಡಲಾಗುತ್ತದೆ. ಇದಕ್ಕೆ ರಶೀದಿಯನ್ನೂ ನೀಡಲಾಗುವುದಿಲ್ಲ. ಹಾಗಾದರೆ ವಿದ್ಯುತ್ ಕಂಬಗಳ ಅಳವಡಿಕೆಗೆ ಯಾವುದೇ ಮಾನದಂಡಗಳು ಇಲ್ಲವೇ ಎಂದು ಅಬ್ದುಲ್ ಖಾದರ್ ಮೊಟ್ಟೆಂಗಾರು ಸಭೆಯಲ್ಲಿ ಪ್ರಸ್ತಾಪಿಸಿದರು.
ಉತ್ತರಿಸಿದ ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಅವರು ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲೇ ಅಳವಡಿಸಲಾಗುತ್ತದೆ. ಆದರೆ ವಿದ್ಯುತ್ ಕಂಬಗಳಿಗೆ ವಾಹನ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದಲ್ಲಿ ಚಾಲಕರು ನೇರವಾಗಿ ಹಣ ನೀಡುವ ಬದಲು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ನಾವು ವಿದ್ಯುತ್ ಕಂಬ ದುರಸ್ತಿಗೆಜಯ ಸೂಚಿಸಿ, ಹಾನಿ ಸಂಬಂಧಿಸಿದ ಮೊತ್ತ ಪಡೆದು ರಶೀದಿ ನೀಡುತ್ತೇವೆ ಎಂದರು. ಅರಂತೋಡು, ಸಂಪಾಜೆ ಭಾಗದಲ್ಲಿ ಹೆದ್ದಾರಿ ಇಲಾಖೆಯವರೇ ವಿದ್ಯುತ್ ಕಂಬಗಳನ್ನು ಸೂಚಿಸಿದಲ್ಲಿ ಹಾಕಲಾಗಿದೆ ಎಂದು ತಿಳಿಸಿದರು.
ಪಿ.ಎಸ್.ಗಂಗಾಧರ ಮಾತನಾಡಿ, ಉಬರಡ್ಕ ಗ್ರಾಮವನ್ನು ಸಮೀಪದ ಸುಳ್ಯವನ್ನು ಬಿಟ್ಟು 13-14 ಕಿ.ಮೀ. ದೂರದ ಮೆಸ್ಕಾಂನ ಜಾಲ್ಸೂರು ಸೆಕ್ಷನ್ ಗೆ ಸೇರಿಸಲಾಗಿದೆ. ಇದರಿಂದ ಆ ಭಾಗದ ಜನರು ಸಮಸ್ಯೆ ಪಡಬೇಕಾಗಿದೆ. ನಮ್ಮನ್ನು ಸುಳ್ಯ ಸೆಕ್ಷನ್ ಗೆ ಸೇರಿಸುವಂತೆ ಅವರು ಒತ್ತಾಯಿಸಿದರು.
ಸೆಕ್ಷನ್ ಗೆ ಸೇರಿಸುವ ಸಂದರ್ಭದಲ್ಲಿ ಬೌಗೋಳಿಕ ವ್ಯಾಪ್ತಿ ನೋಡಿ ಸೇರಿಸಬೇಕಾಗಿತ್ತು. ಇಲ್ಲಿ ಗೊಂದಲ ಉಂಟಾಗಿ ಸಮಸ್ಯೆ ಆಗಿದೆ. ಮುಂದೆ ಸುಳ್ಯ ನಗರ, ಗ್ರಾಮಾಂತರ ವಿಭಾಗಿಸಲಾಗುವುದು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಪೆಂಡಿಂಗ್ ನಲ್ಲಿದೆ. ಆದರೂ ಉಬರಡ್ಕ ಭಾಗದ ದೂರುಗಳನ್ನು ಸುಳ್ಯದಲ್ಲಿ ಸ್ವೀಕರಿಸಲು ಸೂಚಿಸಲಾಗಿದೆ ಎಂದು ರಾಮಚಂದ್ರ ತಿಳಿಸಿದರು. ಸುಳ್ಯ ಎಇಇ ಹರೀಶ್ ನಾಯ್ಕ್, ಸುಬ್ರಹ್ಮಣ್ಯ ಎಇಇ ವಸಂತ, ಮೆಸ್ಕಾಂ ಇಂಜಿನಿಯರ್ಗಳಾದ ಸುಪ್ರೀತ್, ಪ್ರಸಾದ್ ಕತ್ಲಡ್ಕ, ಚಿದಾನಂದ ಸೇರಿದಂತೆ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ವ್ತಾಪ್ತಿಯ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಡಿ.ಎಂ.ಶಾರೀಕ್, ಮಾಧವ ಮೂಡೆಕಲ್ಲು ಮತ್ತಿತರರು ಮೆಸ್ಕಾಂ ಗ್ರಾಹಕರು ಸಭೆಯಲ್ಲಿ ಭಾಗವಹಿಸಿದ್ದರು. ಮೆಸ್ಕಾಂನ ಕಿರಿಯ ಇಂಜಿನಿಯರ್ ಅಭಿಷೇಕ್ ಕುಮಾರ್ ಸ್ವಾಗತಿಸಿ, ವಂದಿಸಿದರು