ಸುಳ್ಯ:ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಎಪ್ರಿಲ್ 10 ರಿಂದ 14 ರ ತನಕ ನಡೆಯಲಿದೆ ಎಂದು ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಹಸೈನಾರ್ ಫೈಝಿ ಕೊಡಗು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ
ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ಪುಣ್ಯಸ್ಥಳವಾದ ಅಜ್ಜಾವರ – ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.ಉರೂಸ್ ಕಾರ್ಯಕ್ರಮವು ಜ 10 ರಂದು ಅಜ್ಜಾವರ ಮಸೀದಿ ವಠಾರದಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ.
ಇದೇ ಉರೂಸ್ ಕಾರ್ಯಕ್ರಮ ಎಪ್ರಿಲ್ 14 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ಸಮಾಪನ ಗೊಳ್ಳಲಿದೆ.
ಎಪ್ರಿಲ್ 10 ರಂದು ಶುಕ್ರವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುಆಃ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಧಾರ್ಮಿಕ ಮತಪ್ರವಚನ ಅಜ್ಜಾವರ ಜುಮ್ಮಾ ಖತೀಬರಾದ ಹಸೈನಾರ್ ಪೈಝಿ ಕೊಡಗು ನೀಡಲಿದ್ದಾರೆ.
ಎ.11 ರಂದು ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯಲಿರುವ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಪ್ರಖ್ಯಾತ ಭಾಷಣಗಾರ ಕಲ್ಲಡ್ಕ ಜುಮ್ಮಾ ಮಸೀದಿ ಖತೀಬರಾದ ಸಯ್ಯದ್ ಆಲಿ ಮನ್ನಾನಿ ಉಪನ್ಯಾಸ ನೀಡಲಿದ್ದಾರೆ.
ಎಪ್ರಿಲ್ 12ರಂದು ಮೇನಾಲ ದರ್ಗಾ ಶರೀಫ್ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ಮತ್ತು ಝಿಕ್ರ್ ಹಲ್ಕ ನಡೆಯಲಿದೆ ಕಾರ್ಯಕ್ರಮವು ಸಯ್ಯದ್ ಹಕೀಂ ತಂಙಳ್ ಅದೂರು ರವರ ನೇತೃತ್ವದಲ್ಲಿ ನಡೆಯಲಿದೆ.

ಪ್ರಖ್ಯಾತ ವಾಗ್ಮಿ ಅನ್ವರ್ ಆಲಿ ಹುದವಿ ಪುಳಿಯಕ್ಕೋಡ್ ಮಲಪ್ಪುರಂ ಉಪನ್ಯಾಸ ನೀಡಲಿದ್ದಾರೆ.
ಎ.13 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿರುವ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಇಕ್ಬಾಲ್ ಮೌಲವಿ ನೆಲ್ಯಾಹುದಿಕೇರಿ ಕೊಡಗು ಅವರು ದಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ಸಮಾರಂಭ ಮತ್ತು ಸೌಹಾರ್ದ ಸಮಾರಂಭ:
ಎ.14 ರಂದು ಸಂಜೆ ಅಜ್ಜಾವರ ಮೇನಾಲ ಉರೂಸ್ ಸಮಾರಂಭದಲ್ಲಿ ಪ್ರತಿವರ್ಷವೂ ವಿಶೇಷವಾಗಿ ನಡೆಸಿಕೊಂಡು ಬರುತ್ತಿರುವ ಸೌಹಾರ್ದ ಸಂಗಮ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ
ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ. ಅಜ್ಜಾವರ ಮಸೀದಿ ಖತೀಬರಾದ ಹಸೈನಾರ್ ಫೈಝಿ ಕೊಡಗು ಅವರ ದುವಾಶಿರ್ವಚನ ಮಾಡಲಿದ್ದಾರೆ.ಸೌಹಾರ್ದ ಸಮಾರಂಭದಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕ್ತೆಸರರಾದ ಎಂ.ಗುಡ್ಡಪ್ಪ ರೈ ವಹಿಸಲಿದ್ದಾರೆ.
ನಿವೃತ್ತ ಶಿಕ್ಷಕ ಸಮಾಜ ಸೇವಕರಾದ ಯು.ಎಸ್ ಚಿದಾನಂದ ಮಾಸ್ಟರ್ ಗೂನಡ್ಕ ,ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ಫಾ.ಒಲ್ವಿನ್ ಎಡ್ವರ್ಡ್ ಡಿಕುನ್ಹಾ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ ಹಾಗೂ ಅನೇಕ ಸರ್ವ ಧರ್ಮೀಯ ಹಿತೈಷಿಗಳು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ಲ ಕುಂಞಿ ಹಾಜಿ ಪಳ್ಳಿಕರೆ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಮತ್ತು ಕೂಟು ಪ್ರಾರ್ಥನೆಯನ್ನು ದ.ಕ.ಜಿಲ್ಲಾ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಅಧ್ಯಕ್ಷರಾದ ಶೈಖುನಾ ಅಲ್ ಹಾಜ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಕೇರಳ ನೆರವೇರಿಸಲಿದ್ದಾರೆ ಅಂತಾರಾಷ್ಟ್ರೀಯ ಪ್ರಭಾಷಣಗಾರ ಆಶಿಕ್ ದಾರಿಮಿ ಆಲಪ್ಪುಝ ಕೇರಳ ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ದಿನ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ನಡೆಯಲಿದೆ.ಪ್ರತಿದಿನ ರಾತ್ರಿ ಅನ್ನದಾನ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಕುಂಞಿ ಹಾಜಿ ಪಳ್ಳಿಕರೆ, ಪ್ರಧಾನ ಕಾರ್ಯದರ್ಶಿ ಶೌಖತ್ ಅಲಿ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ ಉಪಸ್ಥಿತರಿದ್ದರು.











