ಸುಳ್ಯ:ಅಜ್ಜಾವರ ಗ್ರಾಮದ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಉದ್ಘಾಟನೆಗೆ ಎಲ್ಲಾ ಸಿದ್ಧತೆ ನಡೆಸಲಾಗಿದ್ದರೂ ಶಾಸಕರ ಸೂಚನೆಯ ಮೇರೆಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಿದ ಘಟನೆ ನಡೆದಿದೆ. ಎಕಾಏಕಿ ಕಾರ್ಯಕ್ರಮ ರದ್ದುಗೊಂಡಿರುವ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೇರಿದ್ದ ಪೋಷಕರು, ಸಾರ್ವಜನಿಜರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದಿಂದ ಮಂಜೂರುಗೊಂಡಿದ್ದ
13.90 ಲಕ್ಷ ರೂ ಗಳಲ್ಲಿ ನಿರ್ಮಾಣಗೊಂಡಿದ್ದ ಶಾಲಾ ಕೊಠಡಿ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಮತ್ತಿತರ ಕಾರ್ಯಕ್ರಮ ಜ.27ರಂದು ದಿನ ನಿಗದಿ ಮಾಡಲಾಗಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. 2022-23 ನೇ ಸಾಲಿನ ರಾಜ್ಯ ವಲಯ ಮುಂದುವರಿದ ಯೋಜನೆಯಡಿ ಸರಕಾರಿ ಪ್ರಾಥಮಿಕ/ಪ್ರೌಢಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಮೇನಾಲ ಶಾಲೆಗೆ 13.90 ಲಕ್ಷ ಮಂಜೂರಾಗಿ ಕಟ್ಟಡ ನಿರ್ಮಾಣ ಆಗಿದೆ. ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಶಾಸಕರು ಕೂಡಾ ಬರಲು ಒಪ್ಪಿಕೊಂಡಿದ್ದರೆನ್ನಲಾಗಿದೆ.

ಕಾರ್ಯಕ್ರಮ ನಡೆಸಲು ಶಾಲೆಯಲ್ಲಿ ಎಲ್ಲ ಸಿದ್ಧತೆ ಮಾಡಲಾಗಿತ್ತು. ತಳಿರು ತೋರಣಗಳಿಂದ ಶಾಲೆಯನ್ನು ಸಿಂಗಾರ ಮಾಡಲಾಗಿತ್ತು. ಅಡುಗೆ ವ್ಯವಸ್ಥೆ, ಶಾಮಿಯಾನ, ಬ್ಯಾನರ್ ಹೀಗೆ ಎಲ್ಲ ವ್ಯವಸ್ಥೆಗಳು ಆಗಿದೆ. ಆದರೆ ಜ.26ರಂದು ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶರು ಶಾಲಾ ಮುಖ್ಯೋಪಾಧ್ಯಾಯಿನಿಯವರಿಗೆ ದೂರವಾಣಿ ಮೂಲಕ ನಾಳೆ ದಿನ ಶಾಸಕರು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವಂತೆ. ಶಾಲಾ ಕೊಠಡಿ ಉದ್ಘಾಟನೆಯನ್ನು ಮುಂದೂಡಿ, ಅವರು ಬಂದ ಬಳಿಕ ಉದ್ಘಾಟನೆ ಮಾಡುತ್ತಾರೆ. ನೀವು ಈಗ ಉಳಿದ ಕಾರ್ಯಕ್ರಮ ಮಾಡುವಂತೆ ಹೇಳಿದರೆಂದೂ ತಿಳಿದುಬಂದಿದೆ. ಇದರಿಂದ ಎಸ್.ಡಿ.ಎಂ.ಸಿ.ಯವರು ತುರ್ತು ಸಭೆ ನಡೆಸಿದರು. ಉದ್ಘಾಟನೆ ಮುಂದೂಡಿ. ನಾನು ಬರುತ್ತೇನೆ ಎಂದು ಶಾಸಕರು ಹೇಳಿದ್ದರಿಂದ ಅವರ ಸೂಚನೆ ಮೀರುವುದು ಸರಿಯಲ್ಲ. ಪ್ರತಿಭಾ ಪುರಸ್ಕಾರ ಮಾತ್ರ ಮಾಡುವುದು ಸರಿಯಲ್ಲ. ಆದ್ದರಿಂದ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದು ಶಾಸಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮಾಡಲು ಸಮಿತಿ ನಿರ್ಧರಿಸಿತೆಂದೂ ತಿಳಿದು ಬಂದಿದೆ. ಇನ್ನು ಶಾಲಾ ಕೊಠಡಿಯ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಆಗಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಕಾರ್ಯಕ್ರಮ ಮುಂದೂಡಲಾಗಿರುವ ಕಾರಣ ಪೋಷಕರು ಹಾಗೂ ವಿದ್ಯಾರ್ಥಿಗಳು ಅಸಮಾಧಾನಗೊಂಡರು. ಡ್ಯಾನ್ಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸಲು ಸಿದ್ಶಗೊಂಡ ಮಕ್ಕಳು ಕಾರ್ಯಕ್ರಮ ಮುಂದೂಡಲಾಗಿರುವ ವಿಷಯ ತಿಳಿದು ಬೇಸರಗೊಂಡರು.
‘ಶಾಸಕರು ತುರ್ತು ಕಾರ್ಯಕ್ರಮ ಇರುವುದರಿಂದ ಶಾಲಾ ಕಟ್ಟಡ ಉದ್ಘಾಟನೆಗೆ ಬರಲು ಆಗುತಿಲ್ಲ. ಕಟ್ಟಡದ ಉದ್ಘಾಟನೆ ಮುಂದೂಡಿ ಎಂದು ಸೂಚನೆ ನೀಡಿದ್ದಾರೆ. ಇದನ್ನು ಶಾಲೆಯವರಿಗೆ ತಿಳಿಸಿದ್ದೇನೆ ಎಂದು
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ತಿಳಿಸಿದ್ದಾರೆ.









