*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ರಾಗ, ತಾಳ,ನೃತ್ಯ ಲಯದಲ್ಲಿ ತೇಲಾಡಿದ ಮೇದಿನಿ ಉತ್ಸವದ ವೇದಿಕೆಯಲ್ಲಿ ಮೇಳೈಸಿದ ವೈವಿಧ್ಯಮಯ ಶಾಸ್ತ್ರೀಯ ನೃತ್ಯಗಳು ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ನೆರೆದ ಪ್ರೇಕ್ಷಕರನ್ನು ಶಾಸ್ತ್ರೀಯ ಸಂಗೀತ, ನೃತ್ಯದ ವಿಸ್ಮಯ ಲೋಕದಲ್ಲಿ ತೇಲಿಸಿ ನೃತ್ಯೋತ್ಸವ ಸಂಪನ್ನಗೊಂಡಿತು. ಅಕ್ಷರಷಃ ಕಲೆಗಳಂಕಣವಾದ
ಕನಕಮಜಲಿನ ಗುರುದೇವ ಕನಕ ಕಲಾಗ್ರಾಮದಲ್ಲಿ ನಡೆದ ನೃತ್ಯೋತ್ಸವ ಶಾಸ್ತ್ರೀಯ ನೃತ್ಯ ಕಲೆಗಳ ರಸದೌತಣನ್ನು ಉಣ ಬಡಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಪ್ರಸ್ತುತಪಡಿಸಿದ ವೈವಿಧ್ಯಮಯ
ಶುದ್ಧ ಶಾಸ್ತ್ರೀಯ ನೃತ್ಯವು ಅದ್ಭುತ ಕಲಾ ಪ್ರಪಂಚವನ್ನು ತೆರೆದಿಟ್ಟಿತು. ಸಂಗೀತ, ನೃತ್ಯ ಕಲಾ ಸಂಜೆಯ ಸೊಬಗಿನಲ್ಲಿ ಕಲಾ ಗ್ರಾಮ ಸಂಭ್ರಮಿಸಿತು. ಮಂಡ್ಯ ಹಾಗೂ ಮೈಸೂರಿನಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಕಳೆದ 26 ವರ್ಷಗಳಿಂದ ಕಲಾ ಸೇವೆ ನಡೆಸುತ್ತಿರುವ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಡೆದ ಎರಡನೇ ವರ್ಷದ ಶಾಸ್ತ್ರೀಯ ನೃತ್ಯೋತ್ಸವ ‘ಮೇದಿನಿ ಉತ್ಸವ’ ಗ್ರಾಮೀಣ ಭಾಗದಲ್ಲಿ ನೃತ್ಯ ಕಲೆಯ ಸೊಬಗನ್ನು ಅನಾವರಣಗೊಳಿಸಿತು. ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲಾಪ್ರಕಾರಗಳ ಕುರಿತು ಜಾಗೃತಿ ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಮೂರ್ಜೆ ಮುತ್ತಣ್ಣ ಗೌಡ ಮತ್ತು ನಳಿನಿ ಮುತ್ತಣ್ಣ ಗೌಡ ಅವರ ಸ್ಮರಣಾರ್ಥ ಅದ್ದೂರಿ ಕಲಾ ಸಂಭ್ರಮ ‘ಮೇದಿನಿ ಉತ್ಸವ’ ಆಯೋಜಿಸಲಾಗಿತ್ತು.
ಕುಣಿತ ಭಜನೆಯೊಂದಿಗೆ ಆರಂಭಗೊಂಡ ಕಲಾ ಉತ್ಸವದಲ್ಲಿ ಗುರುದೇವ ಅಕಾಡೆಮಿಯ ಕಲಾವಿದರು ಪ್ರಸ್ತುತ ಪಡಿಸಿದ ಸಮೂಹ ನೃತ್ಯ ಕಲಾಸಕ್ತರನ್ನು ಮೂರ್ಜೆ ಮನೆಯಂಗಳಕ್ಕೆ ಸ್ವಾಗತಿಸಿತು. ಬಳಿಕ ಭೀಮಾಶಂಕರ ಬಿದನೂರು ನೇತೃತ್ವದಲ್ಲಿ ನಡೆದ ತಬಲ ವಾದನ ರೋಮಾಂಚನ ಸೃಷ್ಠಿಸಿತು. ಮೈಸೂರಿನ ಗುರು ಭೀಮ ಶಂಕರ ಬಿದನೂರು, ಅಭಿನವ್ ಕೆ ಭಾರದ್ವಾಜ್, ಮಾನಸ ಎಸ್.ಸಾಮಗ, ಶಿವಸ್ಕಂದನ್ ಆರ್, ರಜತ ಪ್ರಣವ, ಪಂಚಮಿ ಬಿದನೂರು ಅವರ ತಂಡ ತಬಲಾದಲ್ಲಿ ಬೆರಳಿನಲ್ಲಿ ಸಂಗೀತದ ಮಾಯಾ ಲೋಕ ಸೃಷ್ಠಿಸಿತು.
ಬಳಿಕ ಶಾಸ್ತ್ರೀಯ ನೃತ್ಯದ ಅದ್ಭುತ ಲೋಕ ಅನಾವರಣಗೊಂಡಿತು. ನವ್ಯಶ್ರೀ ಬಿ.ಎಂ ಮಂಡ್ಯ ಜಗನ್ಮೋಹಿನಿ ರಾಗದಲ್ಲಿ ಆದಿ ತಾಳದಲ್ಲಿ ತಾಯೇ ಮಹೇಶ್ವರಿ ವರ್ಣಂ ಪ್ರಸ್ತುತ ಪಡಿಸಿ ಮನ ಸೆಳೆದರೆ, ಮಂಡ್ಯದ ಗೀತಾಲಿ ಕೆ.ವಿ ಗೌಳ ರಾಗದ ಚತುರಾಷ್ಟ್ರ ಏಕ ತಾಳದಲ್ಲಿ ತಂಜಾವೂರ್ ಸಹೋದರರು ರಚಿಸಿದ ಮುರುಗನ್ ಕೌತುವಂ ಪ್ರಸ್ತುತ ಪಡಿಸಿದರು. ಬಳಿಕ ಮಂಡ್ಯದ ನಮೃತಾ ಬಿ ಪ್ರಸಾದ್ ಮತ್ತು ಅರ್ಪಿತಾ ಅವರ ಯುಗಳ ನೃತ್ಯ ಮೋಡಿ ಮಾಡಿತು. ವಳಚಿ ರಾಗ, ಮಿಶ್ರಚಾಪು ತಾಳದಲ್ಲಿ
ಗುರು ಭಾರದ್ವಾಜ್ ಕೀರ್ತನೆಯಲ್ಲಿ ಶಾರದಾ ಕೌತುವಂ, ಹೇಮಶ್ರೀ ಎಸ್.ಬೆಂಗಳೂರು ನಾಸಾಮಣಿ ರಾಗ ಆದಿ ತಾಳದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಕೃತಿ ಶ್ರೀರಾಮ ಸರಸ್ವತಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಆ ನಂತರ ಡಾ.ಚೇತನಾ ರಾಧಾಕೃಷ್ಣ ಹಾಗೂ ಶಿಷ್ಯೆ ಸಹನಾ ಭಟ್ ಅವರ ನೃತ್ಯ ಜುಗಲ್ಬಂಧಿ ನೋಡುಗರ ಮನಸೂರೆಗೊಂಡಿತು. ಮೋಹನ ರಾಗ ಆದಿ ತಾಳದಲ್ಲಿ ಮೈಸೂರು ವಾಸುದೇವಾಚಾರ್ಯರ ಕೃತಿ ರಾ ರಾ ರಾಜೀವಲೋಚನಾಕ್ಕೆ ಪ್ರಸ್ತುತಪಡಿಸಿದ ಭರತನಾಟ್ಯ ಬಹುಕಲಾ ಮನಸ್ಸಿನಲ್ಲಿ ಉಳಿಯುವಂತೆ ಮಾಡಿತು.
ಬಳಿಕ ಐನಾ ಸೋಮಯ್ಯ ರಾಗಮಾಲಿಕೆ ಆದಿತಾಳದಲ್ಲಿ ಪುರಂದರ ದಾಸರ ದೇವರ ನಾಮ ಚಂದ್ರಚೂಡ ಪ್ರಸ್ತುತಿಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಮಂಡ್ಯದ ಜಾಹ್ನವಿ ಮತ್ತು ಮನ್ವಿತ ಕೀರವಾಣಿ ರಾಗ ಆದಿತಾಳದಲ್ಲಿ ಪಾಪನಾಶಂ ಶಿವನ್ ಅವರ ದೇವಿ ನೀಯೇ ತುಣೈ.. ಕೃತಿಗೆ ಮನಮೋಹಕವಾಗಿ ನೃತ್ಯ ಪ್ರದರ್ಶನ ನೀಡಿದರು. ಹಂಸಧ್ಬನಿ ರಾಗ ಆದಿ ತಾಳದಲ್ಲಿ ಸ್ವಾತಿ ತಿರುನಾಳ್ ಅವರ ಶಂಕರ ಶ್ರೀಗಿರಿ ಕೃತಿಗೆ ಪೂರ್ವಿಕಾ ನಾಗೇಶ್ ಮಂಡ್ಯ, ಯಮನ್ ಕಲ್ಯಾಣಿ ರಾಗ ಆದಿ ತಾಳದಲ್ಲಿ ಪುರಂದರದಾಸರ ಕೃಷ್ಣಾ ನೀ ಬೇಗನೇ ಬಾರೋ ದೇವರ ನಾಮಕ್ಕೆ ಡಾ.ನಂದಿನಿ ಕೇಶವ್ಅ ವರ ಭರತ ನಾಟ್ಯ ಗಮನ ಸೆಳೆಯಿತು. ಹಂಸಧ್ವನಿ
ರಾಗ ಆದಿ ತಾಳದಲ್ಲಿ ಸಾಹಿತ್ಯ ಶೆಟ್ಟಿ ಮಂಡ್ಯ ಪ್ರಸ್ತುತಪಡಿಸಿದ ಶಕ್ತಿ ತಾಂಡವ, ಆನಂದ ಭೈರವಿ ರಾಗ ಆದಿ ತಾಳದಲ್ಲಿ ವರ್ಣಂಗೆ ಪ್ರಜ್ಞಾ ಮತ್ತು ದೀಕ್ಷು ಅವರ ಯುಗಳ ನೃತ್ಯಗಳು ಮೋಹಕವಾಗಿ ಮೂಡಿ ಬಂದಿತು. ಬಳಿಕ ನಾಟ ರಾಗ ಆದಿ ತಾಳದಲ್ಲಿ ಮೋಕ್ಷಿತ ಆನಂದ ನಟನ ಗಣಪತಿಂ, ರಾಗಮಾಲಿಕೆ ಆದಿ ತಾಳದಲ್ಲಿ ಅರ್ಧ ನಾರೀಶ್ವರ ಶೃತಿಗೆ ಕ್ಷೇತ್ರ ಹೆಗಡೆ ಮತ್ತು ಇಂಪನ ಅವರ ಭರತ ನಾಟ್ಯ ಯುಗಳ ನೃತ್ಯ ಚಿತ್ತಾಕರ್ಷಕವಾಗಿತ್ತು. ರಾಗಮಾಲಿಕೆ ಆದಿ ತಾಳದಲ್ಲಿ ಪುರಂದರದಾಸರ ಜಗನ್ಮೋಹನನೇ ಕೃಷ್ಣಾ ದೇವರ ನಾಮಕ್ಕೆ ಕನಿಷ್ಕಾ ಎಸ್ ಬೆಂಗಳೂರು, ರೇವತಿ ರಾಗ ಆದಿ ತಾಳದಲ್ಲಿ ತಂಜಾವೂರ್ ಶಂಕರ ಅಯ್ಯರ್ ಅವರ ಮಹಾದೇವ ಶಿವ ಶಂಭೋ ಕೃತಿಗೆ ಕುಷಿ ಡಿ ಗೌಡ ಮನೋಜ್ಞವಾಗಿ ನೃತ್ಯ ಪ್ರದರ್ಶನ ನೀಡಿದರು. ಆರಭಿ ರಾಗ ಆದಿ ತಾಳದಲ್ಲಿ ಆದಿತಿ ಮಂಡ್ಯ ಮುರಳೀಧರ ಕೌತುವಂ, ರಾಗಮಾಲಿಕೆ ಆದಿ ತಾಳದಲ್ಲಿ ತಂಜಾವೂರ್ ಶಂಕರ ಅಯ್ಯರ್ ಅವರ ರಂಜನಿ ಮಾಲಾ ಕೃತಿಗೆ ವಿದುಷಿ ವಿದ್ಯಾಶ್ರೀ ಭರತ ನಾಟ್ಯ, ಹಂಸಧ್ವನಿ ರಾಗ ಏಕ ತಾಳದಲ್ಲಿ
ವಿದುಲ ಎಂ ತ್ರಿಶ ಅಲರಿಪು ಮತ್ತು ಕೌತುವಂ ಪ್ರಸ್ತುತಿ ನೋಡುಗರ ಮನಸೂರೆಗೊಂಡಿತು.ಮನೋಜ್ಞ ನೃತ್ಯ ಶಾಲೆ ಬೆಂಗಳೂರು ಪ್ರಸ್ತುತಪಡಿಸಿದ ಕೌತುವಂ ಮತ್ತು ಕಾವಡಿಯೊಂದಿಗೆ ಮೇದಿನಿ ಉತ್ಸವ ಸಂಪನ್ನಗೊಂಡಿತು. ಸುಮಾರು 6 ಗಂಟೆಗಳಿಗೂ ಹೆಚ್ಚು ಸಮಯ
ಕನಕಮಜಲಿನ ಕಲಾಗ್ರಾಮ ಕಲಾ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಮಿಂದೆದ್ದಿತು. ಶಾಸ್ತ್ರೀಯ ನೃತ್ಯ ವೈವಿಧ್ಯಗಳ
ಅದ್ಭುತ ಕಲಾ ಸಾಂಸ್ಕೃತಿಕಲೋಕವನ್ನು ತೆರೆದಿಟ್ಟಿತ್ತು. ಕಲಾ ರಸಿಕರು ಶಾಸ್ತ್ರೀಯ ನೃತ್ಯದ ವಿಸ್ಮಯ ಲೋಕದಲ್ಲಿ ತೇಲಿ ಹೋದರು.
ಗುರುದೇವ ಲಲಿತ ಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಪಿ.ಎಂ. ಹಾಗೂ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ನೇತೃತ್ವದಲ್ಲಿ ಕಲಾ ಸಂಭ್ರಮ
ಏರ್ಪಡಿಸಲಾಯಿತು. ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಮನೋಜ್ಞವಾಗಿ ಮೇದಿನಿ ಉತ್ಸವದ ಕಾರ್ಯಕ್ರಮ ನಿರೂಪಿಸಿದರು.