ಸುಳ್ಯ: ಮಂಡ್ಯ ಹಾಗೂ ಮೈಸೂರಿನಲ್ಲಿ ಶಾಸ್ತ್ರೀಯ ನೃತ್ಯ ಕಲಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗುರುದೇವ ಲಲಿತ ಕಲಾ ಅಕಾಡೆಮಿಯ ವತಿಯಿಂದ ಎರಡನೇ ವರ್ಷದ ಶಾಸ್ತ್ರೀಯ ನೃತ್ಯೋತ್ಸವ ‘ಮೇದಿನಿ ಉತ್ಸವ’ ಕನಕಮಜಲಿನ ಗುರುದೇವ್ ಕಲಾ ಗ್ರಾಮದಲ್ಲಿ ನ.25ರಂದು ನಡೆಯಲಿದೆ. 25ರಂದು ಸಂಜೆ 4.30ರಿಂದ ಕುಣಿತ ಭಜನೆ, ಗುರುದೇವ್ ಅಕಾಡೆಮಿ ಅಫ್ ಫೈನ್ ಆರ್ಟ್ಸ್ ವತಿಯಿಂದ ಸಮೂಹ ನೃತ್ಯ ನಡೆಯಲಿದೆ. ಸಂಜೆ 5.30ಕ್ಕೆ ಮೇದಿನಿ ಉತ್ಸವವನ್ನು
ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸುವರು. ಉದ್ಯಮಿ ಶಂಕರ್, ಕಾಞಂಗಾಡ್ನ ಕಲಾವಿದರಾದ ನಾರಾಯಣ್, ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ವಿದುಷಿ ನಯನ ರೈ, ವಿದ್ವಾನ್ ದೀಪಕ್ ಕುಮಾರ್, ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ ಅನ್ವಯ ಕಲಾ ವಿಭಾಗದ ಮುಖ್ಯಸ್ಥ ಸಯ್ಯದ್ ಸಯ್ಯದ್ ಆಸಿಫ್ ಅಲಿ, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಉಗ್ಗಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ನ ಕೋಶಾಧಿಕಾರಿ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸುವರು. ಗೌರವ ಉಪಸ್ಥಿತರಾಗಿ ಪಿ.ಎಂ.ನಾಗಪ್ಪ ಗೌಡ ಮೂರ್ಜೆ, ಗೋಪಾಲಕೃಷ್ಣ ಗೌಡ ಮೂರ್ಜೆ, ಲಕ್ಷ್ನೀನಾರಾಯಣ ಕಜೆಗದ್ದೆ, ಸುಧಾಕರ ಕಾಮತ್, ರವಿಶಂಕರ ಕಲ್ಲೂರಾಯ, ನಳಿನಾಕ್ಷಿ ವಸಂತ ಪಲ್ಲತ್ತಡ್ಕ, ತೀರ್ಥಾನಂದ ದುಗ್ಗಳ ನಾರಾಯಣ ಗೌಡ, ಕುಮಾರ್ ಪೆರ್ನಾಜೆ ಭಾಗವಹಿಸಲಿದ್ದಾರೆ.ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿಗಾಗಿ
ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಭಾಗವಹಿಸುವ ರಾಷ್ಟ್ರೀಯ ನೃತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮೂರ್ಜೆ ಶ್ರೀ ಮುತ್ತಣ್ಣ ಹಾಗೂ ಶ್ರೀಮತಿ ನಳಿನಿ ಮುತ್ತಣ್ಣ ನೆನಪಿನಲ್ಲಿ ‘ಮೇದಿನಿ ಉತ್ಸವ’ ಸಂಘಟಿಸಲಾಗುತಿದೆ. ಕಳೆದ ವರ್ಷ ಎರಡು ದಿನಗಳ ಕಾಲ ಖ್ಯಾತ ಕಲಾವಿದರು ಭಾಗವಹಿಸಿದ್ದ ನೃತ್ಯೋತ್ಸವ ನಡೆದಿತ್ತು. ನ.25ರಂದು ನಡೆಯುವ ನೃತ್ಯೋತ್ಸವದಲ್ಲಿ ಖ್ಯಾತ ಕಲಾವಿದರು ಭಾಗವಹಿಸಿ ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲೆಗಳ ರಸದೌತಣ ನೀಡಲಿದ್ದಾರೆ ಎಂದು ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ.ಹಾಗೂ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ.ತಿಳಿಸಿದ್ದಾರೆ.