ಸುಳ್ಯ:ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ -‘ಮಾಸ್ ಲಿಮಿಟೆಡ್’ನ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನೆ ಫೆ.28ರಂದು ಎಪಿಎಂಸಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾಸ್ ಲಿಮಿಟೆಡ್ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಸ್ ಲಿಮಿಟೆಡ್ ಸಂಸ್ಥೆಯು ದಿವಂಗತ ಸಹಕಾರ ರತ್ನ ವಾರಣಾಶಿ ಸುಬ್ರಾಯ ಭಟ್ ಅವವರ ಪ್ರಯತ್ನ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರು ಹಾಗೂ
ಮಾಸ್ ಲಿಮಿಟೆಡ್ ಮಂಗಳೂರು ಇದರ ಗೌರವಾಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರ ಪ್ರೋತ್ಸಾಹದೊಂದಿಗೆ ಪ್ರಾರಂಭಗೊಂಡಿದೆ ಮತ್ತು ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟು ಕಾರ್ಯನಿರ್ವಹಿಸಲಾಗುತಿದೆ.
ಫೆ.28ರಂದು ಮಾಸ್ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಕಾರ್ಯವನ್ನು ಪ್ರಾರಂಭಿಸಲಾಗುವುದು. ಸುಳ್ಯ ವಿಧಾನಸಭಾಕ್ಷೇತ್ರ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಇವರು ಅಡಿಕೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಹಾಗೂ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಅಧ್ಯಕ್ಷತೆ

ವಹಿಸುವರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಎಸ್.ಎನ್. ಮನ್ಮಥ ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಎಪಿಎಂಸಿ ಕಾರ್ಯದರ್ಶಿ ಎಸ್. ರವೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸೀತಾರಾಮ ರೈ ತಿಳಿಸಿದ್ದಾರೆ.
ಅಡಿಕೆ ಸಂಸ್ಕರಣಾ ಘಟಕ:
ಮಾಸ್ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಘಟಕ ಆರಂಭಿಸಲಾಗುವುದು.ಸುಳ್ಯ,ಪುತ್ತೂರು,ಕಡಬ ತಾಲೂಕುಗಳ ಶಾಖೆಗಳಲ್ಲಿ ಖರೀದಿಸಲಾಗುವ ಅಡಿಕೆಗಳನ್ನು ಸುಳ್ಯ ಶಾಖೆಯಲ್ಲಿ ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿ ಕಳುಹಿಸಲಾಗುವುದು. ಮೊದಲು ಇಲ್ಲಿ ಖರೀದಿಸಿದ ಅಡಿಕೆಯನ್ನು ಬೈಕಂಪಾಡಿಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಇನ್ನು ಇಲ್ಲಿಯೇ ಸಂಸ್ಕರಣ ಮಾಡಲಾಗುತ್ತದೆ.ಇದರಿಂದ ಸಾಗಾಟ ವೆಚ್ಚ ಮತ್ತಿತರ ಖರ್ಚು ಕಡಿಮೆ ಮಾಡಬಹುದು ಎಂದು ಸೀತಾರಾಮ ರೈ ಹೇಳಿದರು.

ಶೇ.40 ರಷ್ಟು ವಹಿವಾಟು ವೃದ್ಧಿ:
ಮಾಸ್ ಸಂಸ್ಥೆಯ ಅಧ್ಯಕ್ಷರಾಗಿ ಸೀತಾರಾಮ ರೈ ಸವಣೂರು ಅವರು ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಶೇ.40 ವಹಿವಾಟು ವೃದ್ಧಿಯಾಗಿದೆ. ವ್ಯವಹಾರ ವೃದ್ಧಿಗೊಳಿಸುವುದು, ವರ್ಷ ಪೂರೈಸುವುದರೊಳಗೆ ಮೂರರಿಂದ ನಾಲ್ಕು ಶಾಖೆಗಳನ್ನು ತೆರೆಯುವುದು ಹಾಗೂ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕಾರ್ಯ ಪುನಃರಾರಂಭಿಸುವುದು ಎಂಬ ವಾಗ್ದಾನವನದಂತೆ ಮುನ್ನಡೆದು, ಈಗಾಗಲೇ ಜುಲೈ 2024ರಲ್ಲಿ ಕಾವು ಶಾಖೆಯನ್ನು ಹಾಗೂ ನವೆಂಬರ್ 2024ರಲ್ಲಿ ನಿಂತಿಕಲ್ಲು ಶಾಖೆಯನ್ನು ತೆರೆಯಲಾಗಿದೆ. ಅಲ್ಲದೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಖಡ 40ರಷ್ಟು ವೃದ್ಧಿಯಾಗಿರುತ್ತದೆ.
ಮಾಸ್ ಸಂಸ್ಥೆಯ ಮೂಲಕ ಕೃಷಿಕರ ಅಡಿಕೆಗೆ ಇನ್ನಷ್ಟು ಅಧಿಕ ದರ ದೊರೆಯುವಂತೆ ಮಾಡುವುದು. ಕೃಷಿಕರ ಶ್ರೇಯಾಭಿವೃದ್ಧಿ ಮಾಸ್ ಉದ್ದೇಶ ಎಂದು ಸೀತಾರಾಮ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾಧಿಕಾರಿ ಧನಂಜಯ. ಎಂ.ಎನ್. ಉಪಸ್ಥಿತರಿದ್ದರು.