ಸುಳ್ಯ:ಅಡಿಕೆ ಕೃಷಿಕರ ಜೀವಾಳ ಮಾಸ್ ಸಂಸ್ಥೆ. ಮಾಸ್ ಮೂಲಕ ಅಡಿಕೆಗೆ ಉತ್ತಮ ದರ ದೊರೆಯುಂತಾಗಲಿ. ಜೊತೆಗೆ ಕೃಷಿಕರಿಗೆ ಮಾರ್ಗದರ್ಶನ, ತರಬೇತಿ ನೀಡುವ ಮೂಲಕ ಅಡಿಕೆ ಕೃಷಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು (ಮಾಸ್ ಲಿಮಿಟೆಡ್) ವತಿಯಿಂದ ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಇದರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ನಿಂತಿಕಲ್ಲಿನ ‘ಸಾಧನಾ ಸಹಕಾರಿ ಸೌಧ’ದಲ್ಲಿ
ಆರಂಭಗೊಂಡ
ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಸ್ ಅಡಿಕೆ ಕೇಂದ್ರ ಉದ್ಘಾಟನೆಯಾಗಿರುವ ಈ ದಿನ ಕೃಷಿಕರಿಗೆ ಸುದಿನ ಎಂದು ಹೇಳಿದ ಅವರು ಕೃಷಿಕರು ತಾವು ಬೆಳೆದ ಅಡಿಕೆಯನ್ನು ಮಾಸ್ ಸಂಸ್ಥೆಯ ಮೂಲಕ ಮಾರಾಟ ಮಾಡಿ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು
ಅಡಿಕೆಗೆ ಉತ್ತಮ ದರ ಹಾಗೂ ಮಾರುಕಟ್ಟೆ ಸ್ಥಿರತೆ ದೊರಕಿಸುವ ನಿಟ್ಟಿನಲ್ಲಿ 2001ರಲ್ಲಿ ಜಿಲ್ಲೆಯ ಸಹಕಾರಿಗಳ ಮತ್ತು ಬೆಳೆಗಾರರ ಚಿಂತನೆ ಮೂಲಕ ‘ಮಾಸ್ ಲಿಮಿಟೆಡ್’ ಸಂಸ್ಥೆಯು ಪ್ರಾರಂಭವಾಯಿತು. ಸಂಸ್ಥೆಯು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಮಾರುಕಟ್ಟೆಯನ್ನು ಒದಗಿಸುತ್ತಾ ಬಂದಿದೆ.ಸಂಘದ ಕೇಂದ್ರ ಕಛೇರಿಯು ಮಂಗಳೂರಿನ ಬೈಕಂಪಾಡಿಯ ಎ.ಪಿ.ಎಂ.ಸಿ. ಆವರಣದೊಳಗೆ ಇದೆ. ಪ್ರಕೃತ ದಕ್ಷಿಣ ಕನ್ನಡ ಮತ್ತು
ಉಡುಪಿ ಜಿಲ್ಲೆಗಳಲ್ಲಿ ಸಂಸ್ಥೆಯು 10 ಖರೀದಿ ಕೇಂದ್ರಗಳನ್ನು ಹೊಂದಿದ್ದು ಪ್ರತಿದಿನವೂ ಸದಸ್ಯ ಕೃಷಿಕರ ಅಡಿಕೆಯನ್ನು ಖರೀದಿಸುತ್ತಿದೆ.
ಮಾಸ್ ಸಂಸ್ಥೆಯು ಕಳೆದ ಸಾಲಿನ ವ್ಯವಹಾರವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದ್ದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಕಾವು ಶಾಖೆಯನ್ನು ಹಾಗೂ ನಿಂತಿಕಲ್ಲು ಶಾಖೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಗೊಟ್ಟು ಮಾತನಾಡಿ ಸವಣೂರು ಸೀತಾರಾಮ ರೈ ಅವರ ನೇತೃತ್ವದಲ್ಲಿ ಮಾಸ್ ಸಂಸ್ಥೆ ಅಗಾಧವಾಗಿ ಬೆಳೆಯುತಿದೆ.ಸೀತಾರಾಮ ರೈ ಅವರ ದೂರದೃಷ್ಠಿಯ ಕೆಲಸದಿಂದ ಉತ್ತಮ ಬೆಳವಣಿಗೆ ಸಾಧಿಸಿ ಭರವಸೆ ಮೂಡಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆ.ಪ್ರಸನ್ನ ಎಣ್ಮೂರು ಮಾತನಾಡಿ’ ನಿಂತಿಕಲ್ಲಿನಲ್ಲಿ ಮಾಸ್ ಅಡಿಕೆ ಕೇಂದ್ರ ಆರಂಭವಾಗಿರುವುದು ಸಂತಸ ತಂದಿದೆ. ಈ ಭಾಗದ ಅಡಿಕೆ ಕೃಷಿಕರಿಗೆ ಉತ್ತಮ ದರ ದೊರೆಯಲಿದೆ. ಮಾಸ್ ಮೂಲಕ ಅಡಿಕೆ ಮಾರಾಟ ಮಾಡಿ ಕೃಷಿಕರು ಪ್ರೋತ್ಸಾಹ ನೀಡಬೇಕು ಮತ್ತು ಅಡಿಕೆ ಖರೀದಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮುರುಳ್ಯ- ಎಣ್ಣೂರು ಪ್ರಾಥಮಿಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮಾವತಿ ರೈ.ಕೆ.ಜಿ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ ಬಿ. ಉಪಾಧ್ಯಕ್ಷೆ ದಿವ್ಯಾ ಯೋಗಾನಂದ ಉಳ್ಳಲಾಡಿ, ಪ್ರಗತಿಪರ ಕೃಷಿಕರಾದ ಪಿ. ರಾಮಚಂದ್ರ ಭಟ್ ದೇವಸ್ಯ, ಭಾಗವಹಿಸಿದ್ದರು.
ಮಾಸ್ ಲಿಮಿಟೆಡ್ನ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜೀವಿ ಆರ್.ರೈ, ಪಿ.ರಾಜಾರಾಮ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾ ವ್ಯವಸ್ಥಾಪಕ ಧನಂಜಯ ಮೇರ್ಕಜೆ ಮತ್ತಿತರರು ಉಪಸ್ಥಿತರಿದ್ದರು.
ಮಾಸ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ವಂದಿಸಿದರು. ಚಂದ್ರಶೇಖರ. ಪಿ ಮತ್ತು ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್. ಕಾರ್ಯಕ್ರಮ ನಿರೂಪಿಸಿದರು.