ಬೆಂಗಳೂರು: ವಾಡಿಕೆಗಿಂತ ಮುನ್ನವೇ ಗುರುವಾರ ಕೇರಳಕ್ಕೆ ಪ್ರವೇಶಿಸಿರುವ ನೈಋತ್ಯ ಮಾನ್ಸೂನ್( ಮುಂಗಾರು ಮಳೆ) 2-3 ದಿನದಲ್ಲಿ ಅಂದರೆ ಜೂ 2ರ ವೇಳೆಗೆ ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಜೂ 7ರ ವೇಳೆಗೆ ರಾಜ್ಯಾದ್ಯಂತ ಮಾರುತಗಳು ಆವರಿಸಲಿವೆ. ಜೂ 2ರಿಂದ ಮಳೆ ಚುರುಕು ಪಡೆಯಲಿದೆ. ರಾಜ್ಯದಲ್ಲಿ ಮುಂಗಾರು ಆಶಾದಾಯಕವಾಗಿದೆ. ಜೂನ್ನಿಂದ
ಸೆಪ್ಟೆಂಬರ್ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಜೂನ್ನಲ್ಲಿ ವಾಡಿಕೆಯಷ್ಟೇ ಮಳೆ ಸುರಿಯಲಿದೆ ಎಂದು ಇಲಾಖೆಯ ಅಧಿಕಾರಿಗಳುವ ಮಾಹಿತಿ ನೀಡಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಿಂದ ಮಾನ್ಸೂನ್ ಆರಂಭವಾಯಿತು. ಪೂರಕ ವಾತಾವರಣ ಇರುವುದು,ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವ್ಯಾಪಿರುವ ಮಾನ್ಸೂನ್ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ. ಆ ಭಾಗದಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಮಳೆ ಮುಂದುವರಿದಿದೆ.ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಉಳಿದ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉತ್ತಮ ಮಳೆಯಾಗಲಿದೆ.
ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಜೂ 2ರಂದು ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಜೂ 3ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ.