ಸುಳ್ಯ:ಬೆಳಿಗ್ಗೆ 9 ಗಂಟೆ ಆದರೂ ಮಂಜು ಮುಸುಕಿದ ವಾತಾವರಣ. ಚುಮು ಚುಮು ಚಳಿ.. ವಾತಾವರಣ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದ್ದು ಇಂದು ಬೆಳಗ್ಗಿನಿಂದ ಹರಡಿದ ಮಂಜಿನ ಕಣಗಳು, ಚುಮು ಚುಮು ಚಳಿ ಹಿತಾನುಭವ ನೀಡಿದೆ. ರಾಜ್ಯದ ವಿವಿಧೆಡೆ ತಾಪಮಾನ ಕುಸಿತದಿಂದ ಚಳಿ ಹೆಚ್ಚಾಗುತ್ತಿದ್ದು, ಸುಳ್ಯದ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಕಳೆದ 2-3 ದಿನಗಳಿಂದ
![](https://thesulliamirror.com/wp-content/uploads/2025/01/IMG_20250129_084113.jpg)
ರಾತ್ರಿ ಮತ್ತು ಬೆಳಗ್ಗಿನ ಜಾವ ಸಾಮಾನ್ಯ ಚಳಿಯಾಗುತಿದ್ದು ಬೆಳಗ್ಗಿನ ಜಾವಾ ಎಲ್ಲೆಡೆ ಮಂಜು ಕವಿದ ವಾತಾವತಣ ಇತ್ತು. ಚುಮು ಚುಮು ಚಳಿ ಹಾಗೂ ದಟ್ಟ ಮಂಜು ಎಲ್ಲೆಡೆ ಮುತ್ತಿಕೊಂಡಿತು. ಪರಸ್ಪರ ಕಾಣದಷ್ಟು ಪರಿಸರವನ್ನು ಮಬ್ಬಾಗಿಸಿತ್ತು. ಬೆಳಿಗ್ಗೆ ವಾಯು ವಿಹಾರ, ವಾಕಿಂಗ್, ಜಾಗಿಂಗ್ ಹೊರಟವರಿಗೆ ಬೆಳಗಿನ ಮಂಜಿನ ಚೆಲ್ಲಾಟ, ಚುಮು ಚುಮು ಚಳಿ ಮುದ ನೀಡಿತು.
ಮುಂಜಾನೆಯಿಂದಲೂ ಮಂಜು ಕವಿದದಿದ್ದು 9 ಗಂಟೆಯವರೆಗೂ ದಟ್ಟವಾಗಿ ಹರಡಿತ್ತು. ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ ಭಾಸವಾಗುತ್ತಿತ್ತು.
![](https://thesulliamirror.com/wp-content/uploads/2025/01/IMG_20250129_083943.jpg)
ಕೆಲವು ದಿನಗಳು ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸಿತು. ಮಂಜಿನ ವಾತಾವರಣದಿಂದ ಬೆಳಗ್ಗೆ ಸುಳ್ಯ ಸುಂದರವಾಗಿ ಕಾಣುತ್ತಿತ್ತು. ನಸುಕಿನ ವೇಳೆ ಇಡೀ ಸುಳ್ಯ ಮಂಜಿನ ನಗರಿಯಾಗಿ ಮಾರ್ಪಾಡಾಗಿತ್ತು.
![](https://thesulliamirror.com/wp-content/uploads/2025/01/IMG_20250129_084132.jpg)
ಸುಳ್ಯ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ಕೆಲವು ದಿನಗಳಿಂದ ರಾತ್ರಿ ಹಾಗೂ ಬೆಳಿಗ್ಗೆ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು ಗಡಿ ಗ್ರಾಮಗಳಲ್ಲಿ ಚಳಿಯ, ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿದ್ದು ಮುಂಜಾನೆ ದಟ್ಟ ಮಂಜು ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ.
![](https://thesulliamirror.com/wp-content/uploads/2025/01/IMG_20250129_084124.jpg)