ಚಿತ್ರಗಳು:ಅಪುಲ್ ಇರಾ.
ಮಂಗಳೂರು:ಮಂಗಳೂರು ದಸರಾದ ನವದುರ್ಗೆಯರ ವೈಭವದ ಮೆರವಣಿಗೆ ಮನ ಸೆಳೆಯುತಿದೆ.ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಗೊಂಡ ಶ್ರೀಶಾರದಾ ದೇವಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆಯನ್ನು ನಗರದಲ್ಲಿ ನೆರೆದ ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಶ್ರೀಶಾರದೆ, ದೇವಿಯ ವಿವಿಧ ಅವತಾರಗಳನ್ನು
ಬಿಂಬಿಸುವ ವಿಗ್ರಹಗಳು, ಮಹಾಗಣಪತಿ ಮೂರ್ತಿ ವಿದ್ಯುದ್ದೀಪಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಒಂದರ ಹಿಂದೆ ಒಂದರಂತೆ ಸಾಗಿ ಬರುತ್ತಿದ್ದಂತೆಯೇ ಬೆಳಕಿನ ಅದ್ಭುತ ಲೋಕವೇ ಸೃಷ್ಟಿಯಾಗಿದೆ.ಈ ಮನಮೋಹಕ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.
ಶೋಭಾಯಾತ್ರೆಯಲ್ಲಿ ರಂಗು ರಂಗಿನ ಸ್ತಬ್ಧಚಿತ್ರಗಳು ಹಾಗೂ ಹುಲಿವೇಷ ತಂಡಗಳು ಪ್ರಮುಖ ಆಕರ್ಷಣೆಯಾಗಿದೆ. ಚೆಂಡೆ ವಾದನ, ಡೊಳ್ಳು ಕುಣಿತ, ವೀರಗಾಸೆ, ಬ್ಯಾಂಡ್ ವಾದನ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಲಕ್ಷಾಂತರ ಮಂದಿ ಉತ್ಸವದಲ್ಲಿ ಭಾಗಿಯಾದರು. ವಿದ್ಯುದ್ದೀಪಗಳಿಂದ ನಗರ ಝಗಮಗಿಸಿತ್ತು. ವೈಭವದ ದಸರಾ ಮೆರವಣಿಗೆಯ ಆಸ್ವಾದಿಸಲು ಜನರು ಕಿಕ್ಕಿರಿದು ಸೇರಿದ್ದಾರೆ.ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ 11 ದಿನಗಳ ಕಲಾ ನಡೆದ ದಸರಾದ ಭವ್ಯ
ಶೋಭಾಯಾತ್ರೆಯಲ್ಲಿ ದೇಶ ವಿದೇಶ ಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಿಂದ ಶ್ರೀ ಮಹಾ ಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವರ್ಣ ರಂಜಿತ ಬ್ರಹತ್ ಶೋಭಾ ಯಾತ್ರೆ ಅಳಕೆ, ಮಣ್ಣಗುಡ್ಡೆ, ಲೇಡಿ ಹಿಲ್, ಲಾಲ್ ಬಾಗ್ ಬಲ್ಲಾಳ್ ಬಾಗ್, ಎಂ. ಜಿ ರಸ್ತೆ,ಪಿವಿಎಸ್ ವೃತ್ತ, ಗೋವಿಂದ ಪೈ ವೃತ್ತ, ಕೆ ಎಸ್ ರಾವ್ ರಸ್ತೆ, ಹಂಪನಕಟ್ಟಾ ಸರ್ಕಲ್, ಜಿ ಎಚ್ ರಸ್ತೆ, ಕಾರ್ ಸ್ಟ್ರೀಟ್, ನ್ಯೂ ಚಿತ್ರ ಸಿನಿಮಾ ಮಂದಿರ ಮೂಲಕ ಸಾಗಿ ಬಂದು ಕ್ಷೇತ್ರದ ಪುಷ್ಕರಣಿ ಯಲ್ಲಿ ಶಾರದಾ ಮಾತೆ, ನವ ದುರ್ಗೆಯರು ಹಾಗೂ ಮಹಾಗಣಪತಿ ಮೂರ್ತಿ ಜಲ ಸ್ತಂಭನಗೊಳ್ಳುವ ಮೂಲಕ ಸಂಪನ್ನಗೊಳ್ಳಲಿದೆ.