ಮಂಡೆಕೋಲು:ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವಿಶೇಷ ಕೃಷಿ ಮಾಹಿತಿ ಸಂವಾದ ಕಾರ್ಯಾಗಾರ ಅ.28ರಂದು ಸಂಘದ ಅಮೃತ ಸಹಕಾರ ಸದನದಲ್ಲಿ ನಡೆಯಿತು.
ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗಗಳಿಂದಾಗಿ ಆತಂಕಕ್ಕೊಳಗಾಗಿರುವ ಅಡಿಕೆ ಬೆಳೆಗಾರ ಕೃಷಿಕರಿಗಾಗಿ ಆಧುನಿಕ ಪದ್ದತಿಯಲ್ಲಿ ಕಾಳುಮೆಣಸು ಕೃಷಿ ಹಾಗೂ ಅಡಿಕೆ ಬೆಳೆಯ ರೋಗಗಳು ಮತ್ತು ನಿರ್ವಹಣೆ ಬಗ್ಗೆ
ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪೃಗತಿಪರ ಕಾಳು ಮೆಣಸು ಕೃಷಿಕರಾದ ಸುರೇಶ್ ಬಲ್ನಾಡ್ ಕಾರ್ಯಾಗಾರ ನಡೆಸಿಕೊಟ್ಟರು.
ಆಧುನಿಕ ಪದ್ಧತಿಯಲ್ಲಿ ಕಾಳುಮೆಣಸು ಹಾಗೂ ಸಮಗ್ರ ಕೃಷಿ ಎಂಬ ವಿಚಾರದಲ್ಲಿ ಮಾಹಿತಿ ನೀಡಿದ ಅವರು ಆಧುನಿಕ ಪದ್ಧತಿಯಲ್ಲಿ
ಕಾಳುಮೆಣಸು ಬೆಳೆಯುವುದರಿಂದ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು. ಕಾಳುಮೆಣಸು ಬೆಳೆಯುವ ರೀತಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಟ್ಟರು.ನಾಟಿ ಮಾಡುವ ವಿಧಾನ, ನೀರಾವರಿ, ಗೊಬ್ಬರ ನೀಡುವಿಕೆ, ಔಷಧಿ ಸಿಂಪಡಿಸುವ ಬಗ್ಗೆ, ಕೊಯ್ಲಿನ ವಿಧಾನದ ಬಗ್ಗೆ ಮಾಹಿತಿ ನೀಡಿದರು. ರೋಗ ಬರುವುದನ್ನು ತಡೆಯಲು 2-3 ಬಾರಿ ಬೋಡೋ ಸ್ಪ್ರೇ ಮಾಡಬೇಕು.
ಫಲ ನೀಡುವ ಕಾಳು ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ಗೊಬ್ಬರ ನೀಡಬೇಕು, ಹೆಚ್ಚು ಫಲ ನೀಡುವ ಗೊಬ್ಬರ ನೀಡಬೇಕು, ಸಿಮೆಂಟ್ ಕಂಬದಲ್ಲಿ ಕಾಳುಮೆಣಸು ಬೆಳೆಯುವುದು ಹೆಚ್ಚು ಪ್ರಯೋಜನಕಾರಿ ಎಂದು ಮಾಹಿತಿ ನೀಡಿದ ಅವರು ಅವಕಾಶ ಇರುವಲ್ಲೆಲ್ಲ ಕಾಳು ಮೆಣಸು ಬೆಳೆಯಿರಿ ಎಂದು ಹೇಳಿದರು. ಕಾಳು ಮೆಣಸಿಗೆ ನೀರು ಅತೀ ಅಗತ್ಯ ಎಂದ ಅವರು ‘ಪಣಿಯೂರು 1’ ತಳಿಯ ಕಾಳುಮೆಣಸು ಶೇ.80 ಮಂದಿ ಕೃಷಿಕರು ಬೆಳೆಸುತ್ತಾರೆ. ಅದನ್ನು ಬೆಳೆಯಿರಿ ಎಂದರು.
ಅಡಿಕೆ ಬೆಳೆ, ರೋಗಗಳು ಹಾಗೂ ನಿರ್ವಹಣೆ ಬಗ್ಗೆ ಹಾಗೂ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಉದ್ಘಾಟನೆ:
ಪೃಗತಿಪರ ಕಾಳು ಮೆಣಸು ಕೃಷಿಕರಾದ ಸುರೇಶ್ ಬಲ್ನಾಡ್ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು.ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ, ನಿರ್ದೇಶಕರಾದ ಸುರೇಶ್ ಕಣೆಮರಡ್ಕ,ಚಂದ್ರಜಿತ್ ಮಾವಂಜಿ, ಪದ್ಮನಾಭ ಚೌಟಾಜೆ,ಈಶ್ವರ ಚಂದ್ರ ಕಡಂಬಳಿತ್ತಾಯ, ಸುನಿಲ್ ಪಾತಿಕಲ್ಲು, ಸರಸ್ವತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ಪ್ರಮುಖರಾದ ಜಯರಾಜ್ ಕುಕ್ಕೇಟ್ಟಿ,ಅನಂತಕೃಷ್ಣ ಚಾಕೋಟೆ, ಡಿ.ವಿ.ಸುರೇಶ್ ದೇವರಗುಂಡ, ವೀಣಾ ದೇವರಗುಂಡ, ಉಷಾ ಗಂಗಾಧರ, ದಾಮೋದರ ಪಾತಿಕಲ್ಲು ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕ ಚಂದ್ರಜಿತ್ ಮಾವಂಜಿ ಸ್ವಾಗತಿಸಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಸುರೇಶ್ ಕಣೆಮರಡ್ಕ,
ಕಾರ್ಯಕ್ರಮ ನಿರೂಪಿಸಿದರು.