ಹೊಸದಿಲ್ಲಿ :ಈ ಬಾರಿ ಮುಂಗಾರು ಉತ್ತಮವಾಗಿರಲಿದ್ದು, ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಮಳೆ ಸುರಿಯಲಿದೆ. ಈ ಬಾರಿಯ ಮಳೆಗಾಲದಲ್ಲಿ ಶೇ.106ರಷ್ಟು ಮಳೆ ಬರಲಿದೆ ಎಂದು ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆಯ ಪ್ರಕಾರ ಮಳೆಗಾಲದಲ್ಲಿ ಸಾಮಾನ್ಯವಾಗಿ ಶೇ.96 ರಿಂದ ಶೇ.104ರಷ್ಟು ಮಳೆ ಸುರಿಯಲಿದೆ. ಕಳೆದ
50 ವರ್ಷಗಳ ಸರಾಸರಿ ಗಮನಿಸಿದರೆ 87 ಸೆಂ. ಮೀಟರ್ ಮಳೆಯಾಗಿದ್ದು, ಈ ಬಾರಿ ಅದಕ್ಕಿಂತ ಹೆಚ್ಚು ಮಳೆ ಸುರಿಯಲಿದೆ ಎನ್ನಲಾಗಿದೆ.2024ರ ನೈರುತ್ಯ ಮಾನ್ಸೂನ್ ಅವಧಿಯಲ್ಲಿ (ಜೂನ್ನಿಂದ ಸೆಪ್ಟೆಂಬರ್ವರೆಗೆ) ಇಡೀ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಲಿದೆ. ಎಲ್ ನಿನೋ ಬಳಿಕ ಬಂದ ಲಾ ನೀನಾ ಪರಿಸ್ಥಿತಿಗಳ ಸಹಾಯದಿಂದ ಭಾರತದಲ್ಲಿ ಆಗಸ್ಟ್ – ಸೆಪ್ಟೆಂಬರ್ನಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಐಎಂಡಿ ಹೇಳಿದೆ.
1951 ರಿಂದ 2023ರವರೆಗಿನ ದತ್ತಾಂಶವನ್ನು ಗಮನನಿಸಿದರೆ, ಎಲ್ ನಿನೋ ಪರಿಸ್ಥಿತಿ ಬಳಿಕ ಲಾ ನಿನಾ ಪರಿಸ್ಥಿತಿ ಬಂದ 9 ಬಾರಿಯೂ ಭಾರತದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿದಿದೆ. ಈಶಾನ್ಯ ಭಾರತದ ರಾಜ್ಯಗಳು, ಪೂರ್ವ ಹಾಗೂ ವಾಯುವ್ಯ ಭಾಗದ ಕೆಲ ಪ್ರದೇಶಗಳನ್ನು ಹೊರತುಪಡಿಸಿ ದೇಶಾದ್ಯಂತ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ. ಶೇ.96 ರಿಂದ 104 ಸಾಮಾನ್ಯ ಮಳೆಯಾಗಿದ್ದರೆ, ಶೇ.90 ರಿಂದ 96 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇನ್ನು, ಶೇ.90ಕ್ಕಿಂತ ಕಡಿಮೆ ಮಳೆ ಬಿದ್ದರೆ ಮಳೆ ಕೊರತೆ ಎನ್ನಲಾಗುತ್ತದೆ. ಶೇ.104 ರಿಂದ 110 ಅನ್ನು ವಾಡಿಕೆಗಿಂತ ಹೆಚ್ಚು ಮಳೆ ಎಂದರೆ, ಶೇ.110ಕ್ಕಿಂತ ಹೆಚ್ಚಿದ್ದರೆ ಅಧಿಕ ಮಳೆ ಎಂದು ಕರೆಯಲಾಗುತ್ತದೆ.