ಸುಳ್ಯ:ಪ್ಲಾಟಿಂಗ್, ಹಕ್ಕುಪತ್ರ, ಕೋವಿ ನವೀಕರಣ, ಅಕ್ರಮ ಸಕ್ರಮ ಸೇರಿದಂತೆ ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ನಡೆಸುವ ಸಲುವಾಗಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ವತಿಯಿಂದ ಸಮಾಲೋಚನಾ ಸಭೆ ನ.23ರಂದು ಬೆಳಗ್ಗೆ 11 ಗಂಟೆಗೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ಪ್ರದೀಪ್ ಕುಮಾರ್ ಕೆ.ಎಲ್. ಮತ್ತು ಅಶೋಕ್ ಎಡಮಲೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಅವರು ಸುಳ್ಯ ತಾಲೂಕಿನಾದ್ಯಂತ ನಾಗರಿಕರು
ಅಕ್ರಮ ಸಕ್ರಮ ಹಾಗೂ ವಿವಿಧ ರೀತಿಯಲ್ಲಿ ತಮ್ಮ ಜಮೀನಿನ ಪೋಡಿ ಪ್ರಕ್ರಿಯೆ ಹಲವಾರು ವರ್ಷಗಳಿಂದ ವಿಳಂಬವಾಗಿದ್ದು ಅವುಗಳನ್ನು ಕಂದಾಯ ಕಾಯ್ದೆಯಂತೆ ಪರಿಹರಿಸಿಕೊಳ್ಳಲು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ ಜನರಿಗೆ ಅಗತ್ಯ ಸಲಹೆ ಸೂಚನೆ ಹಾಗೂ ಸಹಕಾರ ನೀಡಲಾಗುವುದು.ಅರಣ್ಯದಂಚಿನ ನಿವಾಸಿಗಳ ವಸತಿ ಹಾಗೂ ಇನ್ನಿತರ ಕಾನೂನುಬದ್ಧ ಹಕ್ಕುಗಳನ್ನು ಅರಣ್ಯ ಹಕ್ಕು ಕಾಯ್ದೆಯಂತೆ ವಿಲೇವಾರಿಗೆ ಕ್ರಮ ವಹಿಸಲು, ಕೋವಿ ಹೊಂದಿರುವ ನಾಗರಿಕರು ಎದುರಿಸುತ್ತಿರುವ ಕೋವಿ ನವೀಕರಣ ಮತ್ತಿತರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸುವುದು. ಕೃಷಿ ಬೆಳೆಗಾರರು ಆಹಾರ, ಹಣ್ಣು, ವಾಣಿಜ್ಯ ಬೆಳೆ, ಸಸಿಗಳ ಆಯ್ಕೆಯ ಗುಣಮಟ್ಟ, ಗೊಬ್ಬರ ಮತ್ತು ಔಷಧಿಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಒಟ್ಟು ಕೃಷಿ ನಿರ್ವಹಣೆಯಲ್ಲಿ ಆರ್ಥಿಕ ಏರುಪೇರಿನ ಸಂಕಷ್ಟಗಳಿಗೆ ಒಳಗಾಗುವ ಪರಿಸ್ಥಿತಿಯಲ್ಲಿ ಮುಂದಿನ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಪೂರಕ ನುರಿತ ತಜ್ಞರ, ರೈತರ ಪ್ರಾಯೋಗಿಕ ಅನುಭವ ಪಡೆಯುವ ಸಮಗ್ರ ಕೃಷಿಯ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು. ನಾಗರಿಕರು ಆಡಳಿತದಿಂದ
ಎದುರಿಸುತ್ತಿರುವ ಎಲ್ಲಾ ರೀತಿಯ ಕಾನೂನಾತ್ಮಕ ವಿಳಂಬ, ನಿರ್ಲಕ್ಷ್ಯ ಇತ್ಯಾದಿಗಳನ್ನು ಸೂಕ್ತ ಕಾನೂನು ಸಲಹೆಗಳು, ಅಗತ್ಯ ಹೋರಾಟದ ಮೂಲಕ ತಾಲೂಕು, ಜಿಲ್ಲಾ, ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸುವ ಸೂಕ್ತ ಕ್ರಮವನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ತೆಗೆದುಕೊಳ್ಳಲಿದೆ. ನಾಗರಿಕ ಸಮಸ್ಯೆಗಳಿಗೆ ನಾಗರಿಕರೇ ಒಗ್ಗೂಡಿ ಸಹಕಾರಿ ಪದ್ಧತಿಯಲ್ಲಿ ಮೂಲಭೂತ ಹಕ್ಕು ಸೌಲಭ್ಯಗಳನ್ನು ಕಾಲಮಿತಿಯಲ್ಲಿ ಪಡೆಯಬೇಕಾಗಿದೆ. ಆದ್ದರಿಂದ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ನಾಗರಿಕರೆಲ್ಲರೂ ಸಭೆಯಲ್ಲಿ ಭಾಗವಹಿಸಿ, ಕುಂದು ಕೊರತೆಗಳನ್ನು ಸ್ವಯಂ ನೀಗಿಸಿಕೊಳ್ಳುವಂತೆ ಅವರು ವಿನಂತಿಸಿದರು.







