ಸುಳ್ಯ: ಮಲೆನಾಡಿನ ಜನರ ಹಿತಕಾಯಲು, ಜನರ ಸಮಸ್ಯೆಯ ಪರಿಹಾರಕ್ಕೆ ಕಳೆದ 13 ವರ್ಷಗಳಿಂದ ಪ್ರಯತ್ನ, ಹೋರಾಟ ನಡೆಸುತ್ತಾ ಬಂದರೂ ಈಗಿನ ರಾಜಕೀಯ ಆಡಳಿತ ವ್ಯವಸ್ಥೆಯಿಂದ ಅದಕ್ಕೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಮಲೆನಾಡಿನ ಕ್ಷೇತ್ರಗಳ ಮೀಸಲಾತಿ ಬದಲಾವಣೆ ಸೇರಿ ಹಲವು ಬೇಡಿಕೆಗಳು ಹಾಗೆಯೇ ಇದೆ. ಈ ಹಿನ್ನಲೆಯಲ್ಲಿ ಮಲೆನಾಡಿನ ಜನರ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಯನ್ನು ಸಾಧಿಸಲು ರಾಷ್ಟ್ರೀಯ ಆಂದೋಲನ ನಡೆಸುವ ನಿಟ್ಟಿನಲ್ಲಿ ಮಲೆನಾಡ ರಾಷ್ಟ್ರ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ಪ್ರದೀಪ್ ಕುಮಾರ್ ಕೆ.ಎಲ್ ಹಾಗೂ ಅಶೋಕ್ ಎಡಮಲೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2010 ರಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಪ್ರಾರಂಭವಾದ ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಂಡು ಪರಿಹಾರಕ್ಕೆ ಪ್ರಯತ್ನ ನಡೆಸಲಾಗಿದೆ. ಗ್ರಾಮೀಣ ಭಾರತದ ಆಚಾರ-ವಿಚಾರ, ಪದ್ಧತಿ, ಕಲೆ, ಸಾಹಿತ್ಯ, ಧಾರ್ಮಿಕ ಒಳಗೊಂಡು ಮಲೆನಾಡಿನ ರೈತರ ಜನಜೀವನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಾ ಬಂದಿದೆ. ಗ್ರೇಟರ್ ತಲಕಾವೇರಿ, ಆನೆ ಕಾರಿಡಾರ್, ವನ್ಯಧಾಮ ವಿಸ್ತೀರ್ಣ, ಕಸ್ತೂರಿ ರಂಗನ್ ವರದಿ, ಪುಷ್ಟಗಿರಿ ವಿಸ್ತರಣೆ, ಕುದುರೆ ಮುಖ ವಿಸ್ತರಣೆ ಇನ್ನಿತರ ಸಂದರ್ಭಗಳಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಿಗೆ ಆತಂಕ ಎದುರಾದ ಸಂದರ್ಭದಲ್ಲಿ ಮಲೆನಾಡಿನ ಐದು ಜಿಲ್ಲೆಗಳಲ್ಲಿ ಹೋರಾಟವನ್ನು ನಡೆಸುತ್ತಾ ಬಂದಿದೆ. ಆದರೆ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಶಾಸಕಾಂಗ, ಕಾರ್ಯಾಂಗಗಳು ಜನರ ಸಮಸ್ಯೆಗಳಿಗೆ, ಆತಂಕಗಳಿಗೆ ಪರಿಹಾರ ಒದಗಿಸಿಲ್ಲ. ಮೂಲ ನಿವಾಸಿಗಳ, ರೈತಾಪಿ ಜನರ ಮೂಲ ಹಕ್ಕಿನ ಉಲ್ಲಂಘನೆ ಆಗುತ್ತಿದೆ. ಮೂಲನಿವಾಸಿಗಳ ಭೂಮಿ ಪರಭಾರೆ ಆಗಿ ಶ್ರೀಮಂತರ ಪಾಲಾಗುತಿದೆ.
ಗುಡ್ಡಗಾಡಿನ ಜನರು ಹಾಗೂ ಕಾಡಿನಂಚಿನ ಗ್ರಾಮದ ರೈತಾಪಿ ಕೂಲಿ ಕಾರ್ಮಿಕರು ಕಳೆದ 70 ವರ್ಷದ ಹಿಂದೆಯಿಂದ ವಾಸವಿದ್ದರೂ ಈ ತನಕ ಜನವರಿಗೆ ಭೂ ಅಡಿ ಸ್ಥಳ ಇಲ್ಲದಿರುವುದು ಶೋಚನೀಯ. ಇದೀಗ ಕಾಡಿನ ಅಂಚಿನ ಗ್ರಾಮದಲ್ಲಿ ಸರ್ವೆ ನಟೆಯುತ್ತಿರುವುದು, ಅರಣ್ಯ ಒತ್ತುವರಿ ಹೆಸರಿನಲ್ಲಿ ಕೆಲವರ ಮೇಲೆ ಪ್ರಕರಣ ದಾಖಲಾಗಿರುವುದು ಕೃಷಿಕನ, ಮೂಲನಿವಾಸಿಗಳ ಆತಂಕ ಹೆಚ್ಚಿಸಿದೆ. 30 ವರ್ಷದ ಹಿಂದೆ

ಗ್ರಾಂಟ್ ಆದ ಭೂಮಿಗಳ ಪ್ಲಾಟಿಂಗ್ ಇನ್ನೂ ಮಾಡಿಲ್ಲ, ಅಕ್ರಮ ಸಕ್ರಮ ಆಗುತ್ತಿಲ್ಲ. ಬಡ ರೈತನಿಗೆ ಒಂದೇ ಒಂದು ತುಂಡು ಭೂಮಿ ಗ್ರಾಂಟ್ ಆಗುವುದಿಲ್ಲ.ಆದರೆ ಶ್ರೀಮಂತರ ಹೆಸರಿಗೆ ಭೂಮಿಯ ಪರಭಾರೆ ಆಗುತಿದೆ. ಮಲೆನಾಡಿನ ಮೂರು ಕ್ಷೇತ್ರಗಳು ಹಲವು ದಶಕಗಳಿಂದ ಮೀಸಲಾತಿಯಲ್ಲಿ ಇದೆ. ಮೀಸಲಾತಿ ರೊಟೇಷನ್ ಆಗಬೇಕು ಎಂದು ಎಷ್ಟೇ ಪ್ರಯತ್ನ ನಡೆಸಿಸರೂ ಆಗುತ್ತಿಲ್ಲ
ಪ್ರತಿ 20 ವರ್ಷಗಳಿಗೆ ಒಮ್ಮೆ ಮೀಸಲಾತಿ ಬದಲಾವಣೆ ಆಗಬೇಕು, ಆದರೆ ಹಲವು ದಶಕಗಳಿಂದ ಅದು ಹಾಗೆಯೇ ಮುಂದುವರಿದಿದೆ ಎಂದರು. ಇದೆಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡಿನ ಉಳಿವಿಗೆ ಮಲೆನಾಡು ಸಮಿತಿ ಜನರ ಅಪೇಕ್ಷೆಯ ಮೇರೆಗೆ ರಾಜಕೀಯ ಸಂಘಟನೆಗೆ ಪ್ರವೇಶವನ್ನು ಮಾಡಲಿದೆ. ರಾಜಕೀಯ ಪಕ್ಷ ಕಟ್ಟುವ ಪ್ರಕ್ರಿಯೆ ಆರಂಭಿಸಲಾಗಿದೆ.
ಎಲ್ಲಾ ಇಲಾಖೆಯಲ್ಲಿರುವ ಭ್ರಷ್ಟಾಚಾರ ನಿಯಂತ್ರಣ, ದೂರವಾಣಿ ಸಂಪರ್ಕ, ಜನರ ಮೂಲಭೂತ ಸೌಲಭ್ಯಕ್ಕೆ ಹೋರಾಟ, ಅರಣ್ಯ ಸಮಸ್ಯೆ, ಕಂದಾಯ ಹಕ್ಕುಗಳ ಸಮಸ್ಯೆ ಪರಿಹಾರ,
ಗ್ರಾಮ್ಯ ಆಚಾರ ವಿಚಾರ ಭಾಷೆ, ಪದ್ಧತಿ ಹತ್ತಿರದ ವಿಶ್ವ ವಿದ್ಯಾನಿಲಯಗಳಲ್ಲಿ ಅಳವಡಿಸುವಿಕೆ. ಜನರ ಸಾಮಾಜಿಕ, ಆರ್ಥಿಕ, ಸಹಕಾರಿ ಉದ್ಯಮ ಕ್ಷೇತ್ರದ ಅಭಿವೃದ್ಧಿ, ಸುಳ್ಯದ ಮೀಸಲಾತಿಯ ವರ್ಗಾವಣೆಯ ಒತ್ತಾಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ನಿಲುವು ಬದಲಾವಣೆಗೆ ಶಾಸಕಾತ್ಮಕವಾಗಿ ಗ್ರಾಮ್ಯ ರಾಷ್ಟ್ರೀಯತೆಯತ್ತ ಜನಾಂದೋಲನ ಹೊಸ ಪಕ್ಷದ ಉದ್ದೇಶ ಎಂದು ಪ್ರದೀಪ್ ಕುಮಾರ್ ಕೆ.ಎಲ್ ಹಾಗೂ ಅಶೋಕ ಎಡಮಲೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾಧವ ಗೌಡ ಸುಳ್ಯಕೋಡಿ ಉಪಸ್ಥಿತರಿದ್ದರು.









