ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆ 2024ಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ನಾಯಕರು ಪಟ್ಟಿ ಬಿಡುಗಡೆ ಮಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದರು. 195 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದೆ. ಇದರಲ್ಲಿ
28 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. 34 ಕೇಂದ್ರ ಸಚಿವರಿಗೆ ಟಿಕೆಟ್ ಲಭಿಸಿದೆ. 47 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ. ಇಬ್ಬರು ಮಾಜಿ ಸಿಎಂಗಳಿಗೆ ಲೋಕಸಭೆಗೆ ಸ್ಪರ್ಧಿಸಲು ಹಸಿರು ನಿಶಾನೆ ತೋರಿಸಲಾಗಿದೆ.
ಪಟ್ಟಿಯ ಪ್ರಕಾರ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಗುಜರಾತ್ನ ಗಾಂಧಿನಗರದಿಂದ ಗೃಹ ಸಚಿವ ಅಮಿತ್ ಶಾ ಅವರು ಸ್ಪರ್ಧಿಸಲಿದ್ದಾರೆ. ರಾಜನಾಥ್ ಸಿಂಗ್ ಲಖನೌದಿಂದ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ 51 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.
ಹಲವು ನಾಯಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದೆ. ಮುಂದಿನ ವಾರದಲ್ಲಿ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುವ ಸಂಭವ ಇದೆ.
ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಗಳಿಗೂ ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ. ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ತಿರುವನಂತಪುರಂ ಲೋಕಸಭೆ ಟಿಕೆಟ್ ನೀಡಲಾಗಿದೆ.
ಕೇರಳ ರಾಜ್ಯದಲ್ಲಿ 12 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.
ಕಾಸರಗೋಡು ಕ್ಷೇತ್ರದಿಂದ ಅಶ್ವಿನಿ ಎಂ.ಎಲ್,
ಕಣ್ಣೂರು – ರಘುನಾಥ್, ವಡಕರ: ಪ್ರಫುಲ್ಲಾ ಕೋಯಿಕೋಡ್ -ಎಂ.ಟಿ, ರಮೇಶ್,ವಮಲಪುರಂ- ಅಬ್ದುಲ್ ಸಲಾಮ್, ಪಾಲಕಾಡ್ -ಕೃಷ್ಣ ಕುಮಾರ್, ತ್ರಿಶೂರ್ – ಸುರೇಶ್ ಗೋಪಿ,
ಪತ್ತನಮ್ತಿಟ್ಟ – ಅನಿಲ್ ಆಂಟನಿ,ತಿರುವನಂತಪುರಂ – ರಾಜೀವ್ ಚಂದ್ರಶೇಖರ್ ಅಭ್ಯರ್ಥಿಗಳಾಗಿದ್ದಾರೆ.