ಧರ್ಮಸ್ಥಳ:ಅತ್ಯಂತ ಪರಿಪೂರ್ಣ,ಸಮೃದ್ಧ ಹಾಗೂ ಸುಂದರ ಭಾಷೆಯಾದ
ಕನ್ನಡವನ್ನು ಬೆಳೆಸಬೇಕಾದರೆ, ಕನ್ನಡ ಬಳಸಬೇಕು ಎಂದು ಹಿರಿಯ ಪತ್ರಕರ್ತ ವಿಶ್ವವಾಣಿ ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್
ಹೇಳಿದರು.ಅವರು ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ
ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ.
ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಮಾತನಾಡಿ ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹೇಳಿದರು.
ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತ್ವಿತ್ವ.ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದೇ ಸಾಹಿತ್ಯದ ಉದ್ದೇಶವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು, ಸರ್ವರ ಹಿತವನ್ನು ಬಯಸುವ ಸಾಹಿತ್ಯ ಸಾತ್ವಿಕವಾದ, ಸಭ್ಯ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು.
ಬೆಂಗಳೂರಿನ ಶಾಂತಾ ನಾಗಮಂಗಲ, ಡಾ. ರಘು, ವಿ., ಧಾರವಾಡದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಸಾಹಿತ್ಯ ಮತ್ತು ಸಾರ್ಥಕ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು.ರಾಜಶ್ರೀ ಎಸ್. ಹೆಗ್ಡೆ ಧನ್ಯವಾದವಿತ್ತರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉನ್ಯಾಸಕರಾದ ಡಾ. ಶ್ರೀಧರ ಭಟ್ ಮತ್ತು ಡಾ. ದಿವಾಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.













