ಸುಳ್ಯ:ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ಕಾಟಕ (ಆಟಿ) ಚಿಕಿತ್ಸಾ ಶಿಬಿರವು ಜು.17ರಿಂದ ಆರಂಭಗೊಂಡಿದ್ದು ಆ.16ರ ತನಕ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜು.17ರಂದು ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಿತು.ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ಕಾಟಕ ಮಾಸದಲ್ಲಿ ಹವಾಮಾನ ವೈಪರೀತ್ಯದಿಂದ
ಮನುಷ್ಯನ ಶರೀರದಲ್ಲಿ ಉಂಟಾಗುವ ದೋಷದ(ವಾತ,ಪಿತ್ತ ಹಾಗೂ ಕಫ) ಅಸ್ಥಿರತೆಯ ನಿವಾರಣೆಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ ಎಂದು ತಿಳಿಸಿದ ಅವರು ಆಟಿ ಚಿಕಿತ್ಸಾ ಶಿಬಿರದ ಉಪಯೋಗವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ, ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ. ಜಿ, ಕಾಲೇಜಿನ ಹಾಗೂ ಆಸ್ಪತ್ರೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.

ಏನೆಲ್ಲ ಚಿಕಿತ್ಸೆ ಲಭ್ಯವಿದೆ?
ಕರ್ಕಾಟಕ ಚಿಕಿತ್ಸೆಯಲ್ಲಿ ಎಣ್ಣೆ ಅಭ್ಯಂಗ, ಸ್ವೇದನ ಚಿಕಿತ್ಸೆ, ಶಿರೋಧಾರ, ತೈಲಧಾರ, ಲೇಪನ ಚಿಕಿತ್ಸೆ, ಕಾಯ ಶೇಕ ಹಾಗೂ ಇನ್ನಿತರ ವಿವಿಧ ರೀತಿಯ ಪಂಚಕರ್ಮ ಚಿಕಿತ್ಸೆಗಳನ್ನು ಆಟಿಯ ವಿಶೇಷ ಆಹಾರ ಪದ್ಧತಿಯೊಂದಿಗೆ ನೀಡಲಾಗುತ್ತಿದ್ದು, ಈ ಶಿಬಿರವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.





