ಉಪ್ಪಿನಂಗಡಿ:ಮೀನುಗಾರಿಕಾ ಇಲಾಖೆಯ ವತಿಯಿಂದ ಉಪ್ಪಿನಂಗಡಿ 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿಗೆ ಐದು ಲಕ್ಷ ಗೌರಿ (ಕಾಮನ್ ಕಾರ್ಪ್) ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮ ನಡೆಯಿತು. ಮೀನು ಮರಿಗಳನ್ನು ನದಿಗೆ ಬಿಟ್ಟು ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನದಿ ನೀರಿನ ಶುದ್ಧತೆಗಾಗಿ ನದಿಗಳಲ್ಲಿ
ಮೀನುಗಳ ಸಂತತಿಯನ್ನು ವೃದ್ಧಿಸುವ ಕಾರ್ಯವಾಗಬೇಕು. ಆದ್ದರಿಂದ ಇನ್ನು ಮುಂದೆ ರಾಸಾಯನಿಕ ಅಥವಾ ಸಿಡಿಮದ್ದು ಬಳಸಿ ಮೀನುಗಳನ್ನು ಹಿಡಿಯುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಹೇಳಿದರು. ಇಲ್ಲಿ ಈ ಬಾರಿ ಐದು ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿದ್ದು, ಎರಡು ವರ್ಷಕ್ಕೆ ಇದರ ಸಂಖ್ಯೆ 25 ಲಕ್ಷವಾಗಬೇಕು ಎಂದರು.
ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಕರ್ನಾಟಕ ರಾಜ್ಯ ರೈತ ಸಂಘ(ಹಸಿರು ಸೇನೆ)ದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ತೌಸೀಫ್ ಯು.ಟಿ.ಡಾ. ರಾಜಾರಾಮ್ ಕೆ.ಬಿ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.





