ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೈದರಾಬಾದ್ನ ಉದ್ಯಮಿ ಎ.ಮಹೇಶ್ ರೆಡ್ಡಿ ಅವರು ಶನಿವಾರ ಚಿನ್ನದ ಪ್ರಭಾವಳಿ ಸಮರ್ಪಿಸಿದರು. ಹಾಗೂ ಶ್ರೀ ದೇವಳದ ಬ್ರಹ್ಮಕಲಶೋತ್ಸವ ದಿನದ ಪ್ರಯುಕ್ತ ದೇವಾಲಯಕ್ಕೆ ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದರು. ಪ್ರಾರ್ಥನೆ ಸಲ್ಲಿಸಿ, ಪ್ರಭಾವಳಿ ಸಮರ್ಪಿಸಲಾಯಿತು. ಪ್ರಭಾವಳಿ ಸಮರ್ಪಿಸಿದ
ಮಹೇಶ್ ಹಾಗೂ ರಾಧಿಕಾ ದಂಪತಿಯನ್ನು ದೇವಳದ ವತಿಯಿಂದ ಗೌರವಿಸಲಾಯಿತು. ೩.೪೦ ಕೆ.ಜಿಯ ಪ್ರಭಾವಳಿಯು ೧.೨೦ ಕೆ.ಜಿ. ಚಿನ್ನ ಹಾಗೂ ೩.೨೦ ಕೆ.ಜಿ. ಬೆಳ್ಳಿಯನ್ನು ಹೊಂದಿದ್ದು ೭೫ ಲಕ್ಷ ವೆಚ್ಚದಲ್ಲಿ ಪ್ರಭಾವಳಿ ತಯಾರಿಸಲಾಗಿದೆ. ಜತೆಗೆ ಅವರು ೫ ಲಕ್ಷ ವೆಚ್ಚದಲ್ಲಿ ದೇವಳಕ್ಕೆ ಶನಿವಾರ ಹೂವಿನ ಅಲಂಕಾರ ಮಾಡಿಸಿದರು. ಮಹೇಶ್ ರೆಡ್ಡಿ ಅವರು ಶ್ರೀ ದೇವಳಕ್ಕೆ ಈಗಾಗಲೇ ವಿವಿಧ ಕೊಡುಗೆಗಳನ್ನು ನೀಡಿದ್ದು, ಮುಂದಕ್ಕೆ ದೇವಳದ ಒಳಾಂಗಣಕ್ಕೆ ಬೆಳ್ಳಿ ರಥ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸದಸ್ಯರಾದ ಪಿ.ಜಿ.ಎಸ್.ಎನ್.ಪ್ರಸಾದ್, ಮನಮೋಹನ್ ರೈ, ಶ್ರೀವತ್ಸ, ವನಜಾ ವಿ.ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರರ್, ಲೋಕೇಶ್ ಮುಂಡೋಕಜೆ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.