ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ.ಸೂಕ್ತ ಯೋಜಿತ ಚಿಂತನೆ ಮೂಲಕ ಶ್ರೀ ದೇವತಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಭಕ್ತರು ಮತ್ತು ಇಲಾಖಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು.ಜಾತ್ರಾ ಸಮಯದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.ಈ ಹಿಂದಿನಂತೆ ಯಾವುದೇ ಗೊಂದಲವಿಲ್ಲದೆ ಜಾತ್ರೆ ನೆರವೇರಲು ಸರ್ವರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಶ್ರೀ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ

ಬುಧವಾರ ಶ್ರೀ ದೇವಳದ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಅಧಿಕ ಭಕ್ತ ವೃಂದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಸೃಷ್ಠಿಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ.ಆದುದರಿಂದ ಜಾತ್ರೋತ್ಸವದ ಸುಸಂಪನ್ನತೆ ವಿನೂತನ ಯೋಜನೆಗಳ ಮೂಲಕ ಕಾರ್ಯಪ್ರವೃತ್ತರಾಗೋಣ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರೋತ್ಸವವು ಅತ್ಯಂತ ಪ್ರಸಿದ್ಧವಾಗಿದೆ.ಸರ್ವ ಭಕ್ತರು ಕಲೆತು ಪರಸ್ಪರ ಸೌಹಾರ್ಧಯುತ ಸೇವೆಯ ಮೂಲಕ ಈ ಬಾರಿ ಮಾದರಿ ಜಾತ್ರಾ ಮಹೋತ್ಸವ ಸಂಪನ್ನವಾಗಲಿ.ಸರ್ವ ಭಕ್ತರಿಗೆ ಸ್ವಯಂಸೇವೆ ನೆರವೇರಿಸಲು ಅವಕಾಶ ನೀಡುವುದರೊಂದಿಗೆ ಅವರಿಗೂ ಶ್ರೀ ದೇವರ ಸೇವೆ ನೆರವೇರಿಸಲು ಅವಕಾಶ ಕಲ್ಪಿಸುವುದು ಅತ್ಯಗತ್ಯ.ಸರ್ವ ಭಕ್ತರು ಜಾತ್ರೋತ್ಸವದ ಸುಸಂಪನ್ನತೆಗೆ ದೇವಳದ ಆಡಳಿತೆಯೊಂದಿಗೆ ಕರಜೋಡಿಸಬೇಕು ಎಂದರು.
ಸಂಪ್ರದಾಯಕ್ಕೆ ಅನುಗುಣವಾಗಿ ಜಾತ್ರೋತ್ಸವವು ನಡೆಯಲಿದೆ.ಈ ಹಿಂದಿನಂತೆ ಭಕ್ತರಿಗೆ ಬೇಕಾದ ಸುಸಜ್ಜಿತ ಅನುಕೂಲತೆಗಳನ್ನು ಮಾಡಿಕೊಂಡು ಜಾತ್ರೋತ್ಸವ ನೆರವೇರಲಿದೆ.ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಜಾತ್ರೋತ್ಸವದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಚಂಪಾಷಷ್ಠಿ ಮಹೋತ್ಸವ ಸಾಂಗವಾಗಿ ನೆರವೇರಲು ಸಹಕರಿಸಬೇಕು.ಭಕ್ತರ ಅನುಕೂಲತೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.ಅವರಿಗೆ ಬೇಕಾದ ಸೂಕ್ತ ಅನುಕೂಲತೆಗಳನ್ನು ಶ್ರೀ ದೇವಳದಿಂದ ಯೋಜನಾಬದ್ಧವಾಗಿ ಪೂರೈಸಲಾಗುವುದು ಎಂದು

ಸಭೆಯಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ:
ಜಾತ್ರಾ ಸಮಯದಲ್ಲಿ ವಾಹನ ಪಾರ್ಕಿಂಗ್ಗಾಗಿ ಸವಾರಿ ಮಂಟಪದ ಬಳಿ, ಆಂಜನೇಯ ಗುಡಿಯ ಬಳಿಯ ಪಾರ್ಕಿಂಗ್,ಬಿಲದ್ವಾರ,ಕುಮಾರಧಾರದ ಹೆಲಿಪ್ಯಾಡ್, ಕುಮಾರಸ್ವಾಮಿ ವಿದ್ಯಾಲಯದ ಮೈದಾನ, ವಲ್ಲೀಶ ಸಭಾಭವನದ ಮೈದಾನ ಪಾರ್ಕಿಂಗ್ಗೆ ಬಳಸಲು ನಿರ್ಧರಿಸಲಾಯಿತು. ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಟಿವಿ ಹಾಗೂ ಹೆಚ್ಚುವರಿ ವಿದ್ಯುತ್ ವ್ಯವಸ್ಥೆ ಅಳವಡಿಸಲು ನಿರ್ಣಯಿಸಲಾಯಿತು. ಚೌತಿ,ಪಂಚಮಿ,ಷಷ್ಠಿ ಹಾಗೂ ಅವಭೃತ ದಿನಗಳಂದು ಭಕ್ತಾಧಿಗಳ ಭೋಜನ ಪ್ರಸಾದವನ್ನು ಷಣ್ಮುಖಪ್ರಸಾದ ಬೋಜನ ಶಾಲೆ ಮತ್ತು ಆದಿಸುಬ್ರಹ್ಮಣ್ಯದ ಬೋಜನಶಾಲೆಯಲ್ಲಿ ನೀಡುವುದೆಂದು ತೀರ್ಮಾನಿಸಲಾಯಿತು.
ಸ್ವಯಂ ಸೇವಕರ ನಿಯೋಜನೆ: ಜಾತ್ರಾ ಸಮಯದಲ್ಲಿ ಬರುವ ಭಕ್ತಾಧಿಗಳ ಒತ್ತಡ ನಿಯಂತ್ರಣದ ಬಗ್ಗೆ ಪ್ರವೇಶ ಗೋಪುರ, ಹೊರಾಂಗಣ ಆದಿ ಸುಬ್ರಹ್ಮಣ್ಯ, ಭೋಜನ ಶಾಲೆ ಇತ್ಯಾದಿ ಕಡೆಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಮೂಡುಬಾಗಿಲು, ಪಡುಬಾಗಿಲು, ಲಗೇಜು ಕೊಠಡಿ, ಮಾಹಿತಿ ಕೇಂದ್ರಗಳಲ್ಲಿ ಸ್ವಯಂ ಸೇವಕರ ನಿಯೋಜನೆಯೊಂದಿಗೆ ಸೂಕ್ತ ವ್ಯವಸ್ಥೆ. ದೇವಳದ ಹೊರಾಂಗಣ, ಒಳಾಂಗಣ, ಸ್ನಾನಘಟ್ಟ, ಭೋಜನ ಶಾಲೆ, ಆದಿ ಸುಬ್ರಹ್ಮಣ್ಯ, ರಥಬೀದಿ ಇತ್ಯಾದಿ ಎಲ್ಲಾ ಕಡೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ನಿರ್ಣಯಿಸಲಾಯಿತು.
ಇತರ ವ್ಯವಸ್ಥೆಗಳ ಬಗ್ಗೆ ಚರ್ಚೆ:
ಸಭೆಯಲ್ಲಿ ನೈರ್ಮಲ್ಯ, ಆರೋಗ್ಯ, ವಿದ್ಯುತ್, ಕುಡಿಯುವ ನೀರು, ಭದ್ರತೆ, ಬೋಜನ ಪ್ರಸಾದ, ಕಾನೂನು ಮತ್ತು ಶಿಸ್ತು ಪಾಲನೆ, ವಸತಿ ವ್ಯವಸ್ಥೆ, ಬಲಿವಾಡು ವ್ಯವಸ್ಥೆ, ಕೃಷಿ ಮೇಳ, ಲಕ್ಷ ದೀಪ, ಶೌಚಾಲಯ, ಬೀದಿ ದೀಪ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ಭಕ್ತಾದಿಗಳ ಬೀದಿ ಉರುಳು ಸೇವೆಗೆ ಅನುಕೂಲತೆ ಮಾಡಿಕೊಡುವ ಬಗ್ಗೆ, ಬೆಳಕಿನ ವ್ಯವಸ್ಥೆ, ಬ್ರಹ್ಮರಥ ಎಳೆಯುವಾಗ ಒತ್ತಡ ನಿಯಂತ್ರಣದ ಬಗ್ಗೆ ಮತ್ತು ಈ ಸಂದರ್ಭ ಊರ ಸ್ವಯಂಸೇವಕರು ಮತ್ತು ಶ್ರೀ ದೇವಳದ ಭದ್ರತಾ ಸಿಬ್ಬಂದಿ ರಥ ಎಳೆಯುವ ಸಂದರ್ಭ ಸೇವೆ ನೆರವೇರಿಸುವುದು ಎಂದು ನಿರ್ಣಯಿಸಲಾಯಿತು. ಹೊರೆಕಾಣಿಕೆ ಸ್ವೀಕಾರ, ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ಒದಗಿಸುವ ಬಗ್ಗೆ ಚರ್ಚಿತವಾಯಿತು.
ಸಭೆಯಲ್ಲಿ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ,ಕಡಬ ತಹಶೀಲ್ದಾರ್ ಪ್ರಭಾಕರ ಕಜ್ಜೋಡಿ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಮನೋಹರ ರೈ, ಶ್ರೀವತ್ಸಾ ಬೆಂಗಳೂರು, ಲೊಕೇಶ್ ಮುಂಡಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು,ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯರು, ಗ್ರಾ.ಪಂ.ಉಪಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಪೋಲೀಸ್, ಆರೋಗ್ಯ, ಅರಣ್ಯ, ಕೆ.ಎಸ್ಆರ್ಟಿಸಿ, ಲೋಕೋಪಯೋಗಿ, ಅಬಕಾರಿ, ಕಂದಾಯ, ಮೆಸ್ಕಾಂ, ದೇವಳದ ಆಡಳಿತಕ್ಕೊಳಪಟ್ಟ ಕಾಲೇಜುಗಳ ಪ್ರಾಂಶುಪಾಲರು, ದೇವಳದ ಸಿಬ್ಬಂಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.









