ಸುಳ್ಯ: ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನ್ಯ ವಿಡಿಯೋ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಪ್ರಕರಣದ ಆರೋಪಿತನಾಗಿರುವ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ರಕ್ಷಾ ಸಮಿತಿ ಪಕ್ಷದ ವತಿಯಿಂದ ಮೇ.13ರಂದು ಹಾಸನಲ್ಲಿ ಬೃಹತ್ ಪ್ರತಿಭಟನೆ ‘ಹಾಸನ ಚಲೋ’ನಡೆಯಲಿದೆ ಎಂದು ಕೆಆರ್ಎಸ್ ಪಕ್ಷದ ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಂಜಿನಿ.ಎಂ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಹಾಸನ ಚಲೋ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ನೂರಾರು ಮಂದಿ ಮಹಿಳೆಯರು ಭಾಗವಹಿಸಬೇಕು ಎಂದು ವಿನಂತಿಸಿದರು. ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸರಿಯಾಗಿ ತನಿಖೆ ನಡೆಸಿದರೆ ಎಸ್ಐಟಿಯಿಂದ ಸಂತ್ರಸ್ತರಾದವರಿಗೆ ನ್ಯಾಯ ಕೊಡಿಸಲು ಸಾಧ್ಯ. ಎಸ್ಐಟಿ ಮೇಲೆ ವಿಶ್ವಾಸ ಇದೆ. ಸರಿಯಾದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರಕಾರ ನೋಡಿಕೊಳ್ಳಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲೇಬೇಕು. ಎಲ್ಲರಿಗೂ ನ್ಯಾಯ ಸಿಗುವ ತನಕ ಕೆಆರ್ಎಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಈ ಬಾರಿಯ ಚುನಾಚಣಾ ಫಲಿತಾಂಶದಲ್ಲಿ ಪಕ್ಷಕ್ಕೆ ಅಸ್ಟೇನು ದೊಡ್ಡ ನಿರೀಕ್ಷೆ ಇಲ್ಲ. ಆದರೆ ಜನಪರ ಕೆಲಸಗಳ ಮೂಲಕ ಪಕ್ಷ ಸಂಘಟನೆ ಮಾಡಿ ಮುಂದಿನ 10 ವರ್ಷದಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಆ ರೀತಿಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಪಕ್ಷ ನಿರಂತರ ಹೋರಾಟ ನಡೆಸಲಾಗುವುದು ಎಂದು ರಂಜಿನಿ ಹೇಳಿದರು.
ಕೆಆರ್ಎಸ್ ಪಕ್ಷದ ಸುಳ್ಯ ತಾಲೂಕು ಸಮಿತಿಗೆ ಸದ್ಯದಲ್ಲಿಯೇ ನೂತನ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ನೂತನ ಪದಾಧಿಕಾರಿಗಳ ನೇಮಕ ಆಗಲಿದೆ ಎಂದರು.
ಕೆಆರ್ಎಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ನೌಫಲ್ ಅಬ್ಬಾಸ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತಾ ರೊಸ್ಸಾರಿಯೋ, ಕಾರ್ಯದರ್ಶಿ ಸಿಮಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.