ಸುಳ್ಯ:ರಾಜ್ಯದಲ್ಲಿ ಸರಕಾರ ಬಂದು ಆರು ತಿಂಗಳಾದರೂ ಅಭಿವೃದ್ಧಿಗೆ ಶಾಸಕರಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಅಸಹಾಯಕರಾಗಿರುವ ಶಾಸಕರುಗಳು ಜನರ

ಮುಂದೆ ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಸರಕಾರದ ಮುಂದೆ ಯಾವುದೇ ಅಭಿವೃದ್ಧಿ ಯೋಜನೆಗಳು ಇಲ್ಲದ ಕಾರಣ ಸಚಿವರುಗಳು, ಶಾಸಕರು ವಿಧಾನ ಸೌಧದ ಕಡೆ ಹೋಗುವುದೇ ಇಲ್ಲ ಎಂದು ಹೇಳಿದ ಅವರು ಪಂಚ ಗ್ಯಾರಂಟಿಗಳನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಲು ಸರಕಾರದಿಂದ ಸಾಧ್ಯವಾಗಿಲ್ಲ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರಿಯಾಗಿ ಹಣ ಬರುತ್ತಿಲ್ಲ. ಶಕ್ತಿ ಯೋಜನೆಗೆ ಸಾಕಷ್ಟು ಬಸ್ ಒದಗಿಸದ ಕಾರಣ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ, ಯುವ ನಿಧಿ ಇನ್ನೂ ಆರಂಭವಾಗಿಲ್ಲ, ವಿದ್ಯುತ್ ದರ ಏರಿಸಿ ಬಳಿಕ ಉಚಿತ ವಾಗಿ ನೀಡುತ್ತಿದ್ದಾರೆ ಎಂದರು. ಎರಡು ಬಣಗಳಾಗಿರುವ ಕಾಂಗ್ರೆಸ್ ಸರಕಾರ ರಾಜ್ಯದ ಹಿತವನ್ನು ಮರೆತಿದೆ. ಆಡಳಿತ ವ್ಯವಸ್ಥೆಯನ್ನು ಮುನ್ನಡೆಸಲು

ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಬರ ಪರಿಹಾರಕ್ಕೆ 10 ಸಾವಿರ ಕೋಟಿ ನೀಡಿ:
ರಾಜ್ಯ ಕಂಡು ಕೇಳರಿಯದ ರೀತಿಯಲ್ಲಿ ಬರದಿಂದ ರಾಜ್ಯ ತತ್ತರಿಸಿದೆ. ಆದರೆ ಸರಕಾರ ಬರ ಪರಿಹಾರಕ್ಕೆ ಏನನ್ನೂ ಮಾಡುತ್ತಿಲ್ಲ. 33 ಸಾವಿರ ಕೋಟಿಯ ನಷ್ಟ ಅಂದಾಜಿಸಲಾಗಿದೆ. ಆದರೆ ಸರಕಾರ ಕೇವಲ 324 ಕೋಟಿ ರೂ ಬಿಡುಗಡೆ ಮಾಡಿ ಕೇಂದ್ರ ಸರಕಾರದತ್ತ ಕೈ ತೋರಿಸುತ್ತಿದೆ. ರಾಜ್ಯ ಸರಕಾರ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಬಳಿಕ ಕೇಂದ್ರ ಸರಕಾರದಿಂದ ಬರ ಪರಿಹಾರ ಪಡೆಯುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಬಿಜೆಪಿಯಿಂದ ಬರ ಅಧ್ಯಯನ ತಂಡ: ಬಿ.ಎಸ್.ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರ ತಂಡವನ್ನು ರಚಿಸಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಭೇಟಿ ಮಾಡಿ ಬರ ಅಧ್ಯಯನ ನಡಸಲಾಗುತ್ತಿದೆ. ನಿಜವಾದ ಬರದ ಸ್ಥಿತಿಯನ್ನು ಅಧ್ಯಯನ ಮಾಡಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಪರಿಹಾರ ಬಿಡುಗಡೆಗೆ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಬಿಜೆಪಿ ನಗರ ಶಕ್ತಿ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ,ನ.ಪಂ.ಸದಸ್ಯರಾದ ಬಾಲಕೃಷ್ಣ ರೈ, ಬುದ್ಧ ನಾಯ್ಕ್, ನಾರಾಯಣ ಶಾಂತಿನಗರ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಪ್ರವಿತಾ ಪ್ರಶಾಂತ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಠ್, ಅರಂತೋಡು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಪ್ರಮುಖರಾದ ರವಿಚಂದ್ರ ಕೊಡಿಯಾಲಬೈಲು, ಕೇಶವ ಮಾಸ್ತರ್,ಪ್ರದೀಪ್ ಕೊಲ್ಲರಮೂಲೆ, ಚಂದ್ರಶೇಖರ ನೆಡಿಲು, ಹೇಮಂತ ಮಠ ಮತ್ತಿತರರು ಉಪಸ್ಥಿತರಿದ್ದರು.









