*ಗಂಗಾಧರ ಕಲ್ಲಪಳ್ಳಿ
ಕೊಲ್ಲಮೊಗ್ರ: 2018 ಮತ್ತು 2022 ರ ಮಳೆಗಾಲವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಕಾಡಂಚಿನ ಗಡಿ ಗ್ರಾಮಗಳಾದ ಕೊಲ್ಲಮೊಗ್ರ, ಹರಿಹರ ಗ್ರಾಮದ ಜನತೆ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಅಂದು ಧೋ ಎಂದು ಉಕ್ಕಿ ಬಂದ ಪ್ರಳಯ ಈ ಎರಡೂ ಗ್ರಾಮಗಳ ಬದುಕನ್ನೇ ನುಚ್ಚು ನೂರು ಮಾಡಿತು. ಅಂದು ಅಬ್ಬರಿಸಿದ ಪ್ರಳಯ ಆಸ್ತಿ, ಪಾಸ್ತಿ, ಮನೆ ಮಠ, ರಸ್ತೆ, ಸೇತುವೆಗಳನ್ನು ಕೊಚ್ಚಿಕೊಂಡು ಹೋಯಿತು. ಭೂರಮೆಯ ಸ್ವರ್ಗದಂತಿರುವ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರ ಗ್ರಾಮಗಳ ಬಹತೇಕ ಭಾಗಗಳಲ್ಲಿ ಪ್ರಳಯ ತಾಂಡವವಾಡಿತು.ಅಂದಿನ ಆ ಪ್ರಳಯ ಈ ಗ್ರಾಮದ ನರ ನಾಡಿಗಳಂತೆ ಇರುವ ಸಂಪರ್ಕ ರಸ್ತೆಗಳನ್ನೂ, ಸೇತುವೆಗಳನ್ನೂ ಆಫೋಷನ ತೆಗೆದುಕೊಂಡಿತು. ಹಲವು
ಸೇತುವೆಗಳು, ಕಿರು ಸೇತುವೆಗಳು, ಕಾಲು ಸಂಕಗಳು ಕೊಚ್ಚಿ ಹೋಗಿ ಸಂಪರ್ಕ ಕಡಿದುಕೊಂಡಿತು. ಕೆಲವು ಸೇತುವೆಗಳ ಅರ್ಧ ಭಾಗ ಜಲ ಸಮಾಧಿಯಾಗಿತ್ತು. ರಸ್ತೆಗಳು ನೀರಿನಲ್ಲಿ ತೇಲಿ ಹೋದವು. ಉಳಿದಿದ್ದ ಅಲ್ಪ ಸ್ವಲ್ಪ ಡಾಮರು ಸರ್ವ ನಾಶವಾಯಿತು. ಅಂದು ಕಡಿತಗೊಂಡ ಸೇತುವೆಗಳು, ರಸ್ತೆಗಳಲ್ಲಿ ಕೆಲವು ನಿರ್ಮಾಣಗೊಂಡವು. ಕೆಲವು ತಾತ್ಕಾಲಿಕವಾಗಿ ದುರಸ್ತಿಗೊಂಡವು. ಆದರೂ ಶಾಶ್ವತ ಪರಿಹಾರ ಆಗಲಿಲ್ಲ. ಹಲವು ಕಡೆಗಳಲ್ಲಿ ಇನ್ನೂ ಸಂಪರ್ಕ ಸೇತು ಸಮರ್ಪಕವಾಗಿಲ್ಲ. ಹಲವು ಕಡೆ, ಸೇತುವೆ, ಕಾಲು ಸಂಕಗಳ ಬೇಡಿಕೆ ಜೀವಂತವಾಗಿದೆ.

(ಪ್ರಳಯ ಸಂದರ್ಭದ ಚಿತ್ರಣ-ಫೈಲ್ ಪೋಟೋಸ್)
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಹತ್ತಾರು ಕಡೆ ಸೇತುವೆ, ಕಿರು ಸೇತುವೆಗಳ ಬೇಡಿಕೆ ಇದೆ. ಕಲ್ಮಕ್ಕಾರು ಬೈಲು ಸೇತುವೆ ಮುಖ್ಯ ಬೇಡಿಕೆ. ಸುಮಾರು 350 ಮನೆಗಳ ಸಂಪರ್ಕ ಕಲ್ಪಿಸುವ ಬೈಲು ಸೇತುವೆಗೆ ಎರಡು ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಬೆಂಡೋಡಿ ಸೇತುವೆಯ ಭಾಗಕ್ಕೆ ಹಾನಿ ಆಗಿತ್ತು. ಅದನ್ನು ಸರಿಪಡಿಸಬೇಕಾಗಿದೆ. ಇಡ್ನೂರು ಸೇತುವೆಯ ತಡೆಗೋಡೆ ಕುಸಿದು ಹೋಗಿದೆ.ಮಳೆಗಾಲದಲ್ಲಿ ದ್ವೀಪವಾಗುವ
ಕೋನಡ್ಕ ಕೊಂದಳ ಪ್ರದೇಶಗಳ ಬವಣೆ ಹೇಳ ತೀರದು.ಇಲ್ಲಿ ಶಾಶ್ವತ ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಇದೆ. ಕಳೆದ 7 ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಮಿತ್ತೋಡಿ ಸೇತುವೆ ಪೂರ್ತಿ ಮಾಡಬೇಕು ಎಂಬುದು ಈ ಭಾಗದ ಜನರ ಬಹುಮುಖ್ಯ ಬೇಡಿಕೆ. ಮಳೆಗಾಲದಲ್ಲಿ ದ್ವೀಪವಾಗಿ ತೀವ್ರ ಸಮಸ್ಯೆ ಎದುರಿಸುವ ಮತ್ತೊಂದು ಪ್ರದೇಶ ಮೆಂಟೆಕಜೆ, ಬಾಳೆ ಬೈಲು ಪ್ರದೇಶ. ಎರಡೂ ಬದಿ ಸಂಪರ್ಕ ಇಲ್ಲದೆ ಈ ಪ್ರದೇಶ ದ್ವೀಪವಾಗಿ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಇಲ್ಲಿಗೆ ಶಾಶ್ವತವಾದ ಸಂಪರ್ಕ ಸೇತುವೆ ನಿರ್ಮಾಣ ಆಗಬೇಕು ಎಂಬುದು ಈ ಭಾಗದ ಜನರ ಬಹುಮುಖ್ಯ ಬೇಡಿಕೆ. ಇದಲ್ಲದೆ ಕೊಲ್ಲಮೊಗ್ರ ಗ್ರಾಮದ ವಿವಿಧ ಭಾಗಗಳಲ್ಲಿ ಸಂಪರ್ಕ ಕಲ್ಪಿಸಲು ಹಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ, ಸೇತುವೆ, ಕಿರು ಸೇತಿವೆಗಳ ನಿರ್ಮಾಣ ಆಗಬೇಕಾಗಿದೆ.

ಹರಿಹರ ಪಲ್ಲತ್ತಡ್ಕ ಭಾಗದಲ್ಲಿಯೂ ಸಂಪರ್ಕ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿ ಆಗಬೇಕಾಗಿದೆ. ಬಾಳುಗೋಡು-ಪದಕ ಸೇತುವೆ, ಉಪ್ಪುಕಳ, ಸಿದ್ಧನಕಟ್ಟೆ ಭೂಕುಸಿತ ಆದ ಪ್ರದೇಶದಲ್ಲಿ ತಡೆಗೋಡೆ, ಬಾಳುಗೋಡು ಬಸವನಗುಡ್ಡೆ ರಸ್ತೆಯ ತಡೆಗೋಡೆ ನಿರ್ಮಾಣದ ಬೇಡಿಕೆ ಇದೆ. ಹರಿಹರ, ಬಾಳುಗೋಡು, ಕೊಪ್ಪತ್ತಡ್ಕ ಸೇತುವೆ, ಐನೆಕಿದು ಕೊಡುಮುಂಡುಗಾರು, ಬಾಳುಗೋಡು ಸಂಪರ್ಕ ರಸ್ತೆ ಅಭಿವೃದ್ಧಿ ಶಿವಾಲ ಎಂಬಲ್ಲಿ ಸೇತುವೆ,ಬಾಳುಗೋಡು- ಮಿತ್ತಡ್ಕ ಸೇತುವೆ ನಿರ್ಮಾಣದ ಬೇಡಿಕೆ ಇದೆ. ಐನೆಕಿದು ಕೊಡುಮಂಡುಗಾರು-ಪುಣೇರಿ ಕಾಲನಿ ರಸ್ತೆ, ಬಸವನಗುಡಿ, ಮುಂಡೋಕಜೆ,ಮಾನಡ್ಕ, ಕೊತ್ನಡ್ಕ, ಉಪ್ಪುಕಳ ಕಾಲನಿ ರಸ್ತೆ ಸೇರಿದಂತೆ ಹತ್ತಾರು ರಸ್ತೆಗಳು, ಸೇತುವೆಗಳ ಅಭಿವೃದ್ಧಿ ಆಗಬೇಕಾಗಿದೆ.
ಒಟ್ಟಿನಲ್ಲಿ ಈ ಎರಡೂ ಗ್ರಾಮಗಳಲ್ಲಿ ಸಂಪರ್ಕ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿ ಇನ್ನೂ ಆಗಬೇಕಾಗಿದೆ.

ನಡುಗಲ್ಲು- ಹರಿಹರ-ಕೊಲ್ಲಮೊಗ್ರ ಮುಖ್ಯ ರಸ್ತೆ ಸೇರಿ ಹಲವು ರಸ್ತೆಗಳು ಡಾಮರೀಕರಣಗೊಂಡು ಅಭಿವೃದ್ಧಿ ಆಗಿದ್ದರೂ ಈ ಎರಡೂ ಗ್ರಾಮದ ಸಂಪರ್ಕ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಎರಡು ಬಾರಿ ಉಂಟಾದ ಪ್ರಳಯದಿಂದ ಕೊಲ್ಲಮೊಗ್ರ ಗ್ರಾಮದಲ್ಲಿ ಸಂಚಾರ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಾತ್ಕಾಲಿಕವಾಗಿ ಕೆಲವೊಂದು ದುರಸ್ತಿ ಕಾರ್ಯ ನಡೆದಿದ್ದರೂ ಶಾಶ್ವತ ಅಭಿವೃದ್ಧಿ ಆಗಬೇಕು ಎಂದು ಹೇಳುತ್ತಾರೆ ಗ್ರಾ.ಪಂ.ಸದಸ್ಯರಾದ ಮಾಧವ ಚಾಂತಾಳ ಗ್ರಾಮಸ್ಥರಾದ
ಉದಯ ಶಿವಾಲ, ಟಿ.ಎನ್.ಸತೀಶ್ ಮತ್ತಿತರರು.
ಹರಿಹರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಹಲವು ರಸ್ತೆ, ಸೇತುವೆಗಳ ನಿರ್ಮಾಣಕ್ಕೆ, ಅಭಿವೃದ್ಧಿಗೆ ಅನುದಾನದ ಅಗತ್ಯ ಇದೆ ಎನ್ನುತ್ತಾರೆ ಹರಿಹರ ಪಳ್ಳತ್ತಡ್ಕ ಗ್ರಾ.ಪಂ ಉಪಾಧ್ಯಕ್ಷರಾದ ಜಯಂತ ಬಾಳುಗೋಡು ಮತ್ತು ಪ್ರಮುಖರಾದ ಡಾ.ಸೋಮಶೇಖರ ಕಟ್ಟೆಮನೆ.

ಗಾಳಿಬೀಡು-ಕಡಮಕಲ್ಲು ರಸ್ತೆ:
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯನ್ನು ಅತ್ಯಂತ ಸಮೀಪದಲ್ಲಿ ಸಂಪರ್ಕಿಸುವ ಗಾಳಿಬೀಡು-ಕಡಮಕಲ್ಲು- ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿ ಮಾಡಬೇಕು ಎಂಬುದು ಹರಿಹರ, ಕೊಲ್ಲಮೊಗ್ರ ಗ್ರಾಮಗಳ ಜನರ ದಶಕಗಳ ಬೇಡಿಕೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ರಸ್ತೆ ಅಸ್ತಿತ್ವದಲ್ಲಿದ್ದರೂ ಅರಣ್ಯದೊಳಗೆ ಹಾದು ಹೋಗುವ ಕಾರಣ ಸುಮಾರು 6 ಕಿ.ಮಿ.ರಸ್ತೆಯ ಅಭಿವೃದ್ಧಿ ಕನಸು ನೆನೆಗುದಿಗೆ ಬಿದ್ದಿದೆ.1980ರ ದಶಕದಿಂದ ರಸ್ತೆಯ ಅಭಿವೃದ್ಧಿಗೆ ಪ್ರಯತ್ನ ನಡೆಸುತ್ತಿದ್ದರೂ ಅದು ಕೈಗೂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಫೆ.10ರಂದು ಪತ್ರಕರ್ತರು ಗ್ರಾಮ ವಾಸ್ತವ್ಯ ನಡೆಸುವ ಹಿನ್ನಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ರಸ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದಾರೆ.









