ಸುಳ್ಯ:ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೋಲ್ಚಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ 2024-25 ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ರಾಜ್ಯ ಸರಕಾರಿ ಶಾಲೆ ಪ್ರಶಸ್ತಿ ಲಭಿಸಿದ ಸಂಭ್ರಮದ ವರ್ಷಾಚರಣೆ ಹಿನ್ನಲೆಯಲ್ಲಿ ಹಳೆ ವಿಧ್ಯಾರ್ಥಿಗಳಿಗೆ ಪ್ರೇರಣಶ್ರೀ ಪ್ರಶಸ್ತಿ ಪ್ರದಾನ, ವಿವಿಧ ಸವಲತ್ತುಗಳ ಉದ್ಘಾಟನೆ ಮಾಜಿ ಸಚಿವ ದಿ.ಗೋವಿಂದೇ ಗೌಡ ಸಂಸ್ಮರಣಾ ಕಾರ್ಯಕ್ರಮವು ಜ.8ರಂದು ನಡೆಯಲಿದೆ ಎಂದು
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುದರ್ಶನ್ ಪಾತಿಕಲ್ಲು ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಶಾಲೆಗೆ 73 ವರ್ಷಗಳು ತುಂಬಿದ್ದು ಈ ಶಾಲೆಯಲ್ಲಿ ದಾನಿಗಳ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಒಟ್ಟು 88 ಲಕ್ಷ ರೂಪಾಯಿಗಳಲ್ಲಿ ವಿವಿಧ ಅಭಿವೃದ್ಧಿಗಳನ್ನು ಕೈಗೊಂಡು ಅತ್ಯುತ್ತಮ ರಾಜ್ಯ ಸರಕಾರಿ ಶಾಲೆ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿ ಒಂದು ವರ್ಷದ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ
ಕೋಲ್ಚಾರ್ ಶಾಲೆಯಲ್ಲಿ ವಿಧ್ಯಾಭ್ಯಾಸ ಪಡೆದು ಉನ್ನತ ಸ್ಥಾನಕ್ಕೇರಿದವರಿಗೆ ಪ್ರೇರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಬೊಜೇಗೌಡ ದಿಕ್ಸೂಚಿ ಭಾಷಣ ಮಾಡುವರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕ್ಯಾಂಪ್ಕೊ ಮಾಜಿ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ, ಆಲೆಟ್ಟಿ ಗ್ರಾ.ಪಂ ಅಧ್ಯಕ್ಷೆ ವೀಣಾ ವಸಂತ್ ಅಲೆಟ್ಟಿ, ಪ್ರಭಾರ ಶಿಕ್ಷಣಾದಿಕಾರಿ ಶೀತಲ್ ಯು.ಕೆ, ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಐವರು ಹಿರಿಯ ವಿಧ್ಯಾರ್ಥಿಗಳಿಗೆ ಪ್ರೇರಣಶ್ರೀ ಪ್ರಶಸ್ತಿ ಪ್ರಧಾನ ಮಾಡಲಿದ್ದು ಜೊತೆಗೆ ಹಿರಿಯ ಹಾಗು ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವು ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಶಿಕ್ಷಕರಾದ ಜಲಜಾಕ್ಷಿ , ರಂಗನಾಥ್, ಶಾಲಾಭಿವೃದ್ದಿ ಸಮಿತಿ ಸದಸ್ಯ ಗಿರೀಶ್ ಪಡ್ಡಂಬೈಲು ಉಪಸ್ಥಿತರಿದ್ದರು.












