ಸುಳ್ಯ: ಹಿಂದಿನ ಕಾಲದ ರಾಜಕಾರಣ ಮತ್ತು ಇಂದಿನ ರಾಜಕಾರಣವನ್ನು ತುಲನೆ ಮಾಡುವುದು, ವಿಮರ್ಶೆ ಮಾಡುವುದು ಸುಲಭದ ಮಾತಲ್ಲ. ಆದರೂ ಇಂದು ರಾಜಕಾರಣ ನಿಂತ ನೀರಾಗದೆ ನಿರಂತರ ಹರಿಯುತ್ತಿರಬೇಕು, ಸಾಹಿತ್ಯ ಸದಾ ಸಿಡಿದೇಳುತ್ತಿರಬೇಕು, ನಮ್ಮ ವ್ಯವಸ್ಥೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ತರುಣ ಸಮಾಜ ಸುಳ್ಯದ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು
ಬಾಲಾವಲಿಕರ್ ರಾಜಾಪುರಿ ಸಾರಸ್ವತ ಸಮಾಜದ ಸಹಯೋಗದಲ್ಲಿ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರರ ಜೀವನ ಕುರಿತು ಲೇಖಕ ಅರವಿಂದ ಚೊಕ್ಕಾಡಿಯವರು ರಚಿಸಿದ ಪುಸ್ತಕ ‘ಕೊಳಲ ಕೈ ಹಿಡಿದು’ ಪುಸ್ತಕ ಬಿಡುಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಅಣ್ಣಾ ವಿನಯಚಂದ್ರರಂತಹಾ ದಿಟ್ಟ ರಾಜಕಾರಣಿಯನ್ನು ನಾನು ನೋಡಿಲ್ಲ, ಸ್ಪೂರ್ತಿ, ಶಕ್ತಿ, ದಿಟ್ಟತನ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು ವಿನಯಚಂದ್ರರು. ಆ ಪ್ರಾಮಾಣಿಕತೆ ಮತ್ತು ದಿಟ್ಟತನದ ವಿನಯಚಂದ್ರರ ಬದುಕು ಆದರ್ಶ ಎಂದು ಅವರು ಹೇಳಿದರು. ಲಕ್ಷ್ಮೀಶ ತೋಳ್ಪಾಡಿಯವರು ತಮ್ಮ ಬರಹದ ಮೂಲಕ ಸಮಾಜಕ್ಕೆ ಗುಣಾತ್ಮಕ ಶಕ್ತಿ ಕೊಡುವವರು ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆ ಮಾಡಿದ ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್ ಮಾತನಾಡಿ ‘ಅಣ್ಣಾ ವಿನಯಚಂದ್ರರು ತತ್ವಗಳನ್ನು, ಮೌಲ್ಯಗಳನ್ನು ಜೀವನದಲ್ಲಿ ಗಟ್ಟಿಯಾಗಿ ಅಳವಡಿಸಿಕೊಂಡು ಮಾನವ ಜನಾಂಗವನ್ನು ಒಟ್ಟಾಗಿಸಲು ಪ್ರಯತ್ನಿಸಿದವರು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಹಿರಿಯರು ಮಾರ್ಗದರ್ಶಕರಾದ ಅಣ್ಣಾ ವಿನಯಚಂದ್ರ ಅವರ ಬದುಕು ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಯುವ ಜನಾಂಗಕ್ಕೆ ಆದರ್ಶ ಮತ್ತು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ’ ಮನುಷ್ಯನ ವ್ಯಕ್ತಿತ್ವ ಬೆಳೆಯುವುದು ನಾಗರಿಕತೆ ಬೆಳೆದಿದೆ ಎಂಬುದರ ಸಂಕೇತ. ಆದರೆ ಈಗ ನಮ್ಮ ಅಭಿವೃದ್ಧಿ ಸೂಚ್ಯಂಕದಲ್ಲಿ ಮನುಷ್ಯನ ವ್ಯಕ್ತಿತ್ವದ ಅಭಿವೃದ್ಧಿಯ ಸೂಚ್ಯಂಕ ಸೇರಿದೆಯೇ ಎಂಬ ಸಂದೇಹ ಇದೆ. ಸ್ವತಂತ್ರವಾಗಿ ಮಾತನಾಡುವುದು ಮತ್ತು ಕೆಲಸ ಮಾಡುವುದು ವ್ಯಕ್ತಿತ್ವ ಬೆಳವಣಿಗೆಯ ಲಕ್ಷಣ ಎಂದು ಅವರು ಅಭಿಪ್ರಾಯಪಟ್ಟರು. ಜನರ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಉತ್ತರ ಕೊಡದೇ ಇದ್ದರೆ ಏನು ಮಾಡುವುದು ಎಂಬ ಬಲು ದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತಿದೆ ಎಂದು ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಅಣ್ಣಾ ವಿನಯಚಂದ್ರ’ ಪುಟ್ಟ ಹೊಳೆಯಾಗಿ ಹರಿದ ತನ್ನ ಜೀವನದ ಹರಿವಿಗೆ ಹಲವರು ದಿಕ್ಕು ತೋರಿದ್ದಾರೆ ಎಂದು ಹೇಳಿದರು.
ತರುಣ ಸಮಾಜದ ಅಧ್ಯಕ್ಷ ಎಂ.ಬಿ.ಸದಾಶಿವ ಅಧ್ಯಕ್ಷತೆ ವಹಿಸಿ ಮಾತನಾಡಿ’ ಸುಳ್ಯದ ರಾಜಕೀಯ ಚರಿತ್ರೆಗೆ ಹೊಸ ತಿರುವು ನೀಡುವ ಕಾರ್ಯಕ್ರಮ ಇದು ಎಂದು ಹೇಳಿದರು. ಅಣ್ಣಾ ವಿನಯಚಂದ್ರ ಅವರದ್ದು ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿತ್ವ, ಅನೇಕ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡಿದ, ಅನೇಕರನ್ನು ಬೆಳೆಸಿದ ವ್ಯಕ್ತಿತ್ವ ಅವರದ್ದು ಎಂದರು.
ಸಾಹಿತಿ ಡಾ.ದೀಪಾ ಫಡ್ಕೆ ಕೃತಿ ಪರಿಚಯ ಮಾಡಿದರು.
ಡಾ.ವೀಣಾ ತೋಳ್ಪಾಡಿಯವರ ಅಭಿನಂದನಾ ಭಾಷಣ ಮಾಡಿದರು. ಕೊಳಲ ಕೈ ಹಿಡಿದು ಕೃತಿಯ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಬಾಲಾವಲಿಕರ್ ರಾಜಾಪುರಿ ಸಾರಸ್ವತ ಸಮಾಜದ ಅಧ್ಯಕ್ಷ ಹೇಮಂತ ಕುಮಾರ್ ಕಂದಡ್ಕ ವಂದಿಸಿದರು. ರಾಮಕೃಷ್ಣ ಭಟ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು. ಕೊಳಲ ಕೈ ಹಿಡಿದು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸುದರ್ಶನ ಸೂರ್ತಿಲ ಕೊಳಲು ನುಡಿಸಿ ಹಿನ್ನಲೆ ಸಂಗೀತ ಒದಗಿಸಿದರು. ಸಮಾರಂಭದಲ್ಲಿ ಲಕ್ಷ್ಮೀಶ ತೋಳ್ಪಾಡಿ, ಅಣ್ಣಾ ವಿನಯಚಂದ್ರ, ಅರವಿಂದ ಚೊಕ್ಕಾಡಿ ಅವರನ್ನು ಸನ್ಮಾನಿಸಲಾಯಿತು.