ಕಾಸರಗೋಡು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ. ಕಿರಣ್ ರಾಜ್ ನಿರ್ದೇಶಿಸಿದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಗೆ ಇದು ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿದೆ. ಕಿರಣ್ರಾಜ್ ನಿರ್ದೇಶಿಸಿದ ತನ್ನ ಚೊಚ್ಚಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಅದು ಸುಳ್ಯ ಹಾಗೂ ಕಾಸರಗೋಡಿಗೆ
ಹೆಮ್ಮೆಯ ಕ್ಷಣ.ಕಿರಣ್ರಾಜ್ ಮೂಲತಃ ಕಾಸರಗೋಡಿನವರು. ಅಂದ ಹಾಗೆ ಕಿರಣ್ರಾಜ್ ಅವರ ತಂದೆಯ ಊರು ಸುಳ್ಯದ ಕೇರ್ಪಳ. ಆದುದರಿಂದ ಇಡೀ ಗಡಿನಾಡಿಗೆ ಇದು ಸಂತಸದ ಸಂಭ್ರಮದ ಕಿರಣ.
ಕಿರಣನ ಸಿನಿಮಾ ಪ್ರೇಮ.. ಸಾಧನೆಗಳ ಬಗ್ಗೆ ಹಿರಿಯ ಪತ್ರಕರ್ತರಾದ ಎಂ.ನಾ.ಚಂಬಲ್ತಿಮಾರ್ ಹೀಗೆ ಬರೆಯುತ್ತಾರೆ….
“ಕೇವಲ 12 ವರ್ಷಗಳ ಹಿಂದೆ…
ಆಗಿನ ಅಗ್ಗದ ವೀಡಿಯೋ ಕ್ಯಾಮರಾ ಒಂದಿಟ್ಕೊಂಡು ಕಾಸರಗೋಡಿನ ಗ್ರಾಮದಲ್ಲಿ ತನ್ನ ಚೊಚ್ಚಲ ಟೆಲಿಫಿಲಂ ನಿರ್ಮಿಸಲು ಕಿರಣ ಓಡಾಡಿದ್ದ!
ಅದರ ಖರ್ಚು ಭರಿಸಲು ಕೂಪನ್ ಹಿಡಿದುಕೊಂಡು ಕನ್ನಡಿಗರ ಮನೆ ಬಾಗಿಲು ತಟ್ಟಿದ್ದ..
ಅಂದು ಅಪಹಾಸ್ಯ ಮಾಡಿದವರೇ ಅಧಿಕ! ಆದರೆ ಕಾಲದ ಓಟ ನೋಡಿ…
ನಿಷ್ಠೆ, ಪ್ರಾಮಾಣಿಕತೆಯ ಪ್ರಯತ್ನ ಕ್ಕೆ ಸಂದ ಗೌರವ ನೋಡಿ..
ಇದೊಂದು ಪ್ರೇರಣೆಯ ರಾಷ್ಟ್ರೀಯ ಸಾಧನೆ.
ಅದೇ ಕಿರಣ್ರಾಜ್ ನಿರ್ದೇಶಿಸಿದ ಪ್ರಪ್ರಥಮ ಚಿತ್ರ “ಚಾರ್ಲಿ 777” ಎಂಬ ಒಂದು ನಾಯೀ ಕತೆ ಈಗ ಕನ್ನಡದ ಅತ್ಯುತ್ತಮ ಚಿತ್ರ ಎನಿಸಿದೆ. ರಾಷ್ಟ್ರೀಯ ಪಶಸ್ತಿಗೆ ಭಾಜನವಾಗಿದೆ!
ಯಾವಾಗ ಡಬ್ಬಿ ಕೆಮರಾ ಹಿಡ್ಕೊಂಡು, ಜನರಿಂದಲೇ ಚಂದಾ ವಂತಿಗೆ ಎತ್ಕೊಂಡು ಟೆಲಿಫಿಲಂ ಮಾಡಿದ್ದನೋ…
ಅದನ್ನೇ ಮೆಟ್ಟಿಲಾಗಿಸಿ ಅತ್ಯಂತ ವೇಗದಲ್ಲಿ ಕಿರಣ್ ರಾಜ್ ಬೆಳೆದು ನಿಂತಿದ್ದಾನೆ! ಮನುಷ್ಯ ಸಾಧನೆಯಿಂದ ಗೆಲ್ಲಬೇಕು. ಆತನಿಗೆ ಛಲವಿತ್ತು.. ಕನಸಿತ್ತು, ಸ್ಪಷ್ಟ ಗುರಿಯೂ ಇತ್ತು. ಅದರೆಡೆಗೆ ನಿಷ್ಠೆಯ ನಡಿಗೆಯಿತ್ತು..!
ಜೀವನದಲ್ಲಿ ಸಾಧನೆ ಅಂದರೆ ಹೀಗಿರಬೇಕು..
ವಿದ್ಯಾರ್ಥಿಯಾಗಿದ್ದಾಗಲೇ ಮುಂಜಾನೆ ಮನೆಮನೆ ದಿನಪತ್ರಿಕೆ ಹಾಕುವ ಮೊದಲ ಉದ್ಯೋಗ ಮಾಡಿದನೋ….ಯಾವ ಊರಲ್ಲಿ ಅತಿಯಾಸೆಯಿಂದ ತೀರ ಎಳವೆಯಲ್ಲೇ ಮೊದಲ ಬಾರಿ ವೇದಿಕೆಯೇರಿ ಏಕಪಾತ್ರಾಭಿನಯ ಮಾಡಿದನೋ…
ಅದೇ ಊರಲ್ಲೀಗ.. ಅದೇ ಹುಡುಗ ಅಕ್ಷರಶಃ ರಾಜನಂತೆ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದಾನೆ.
ಕನ್ನಡ ಸಿನಿಮಕ್ಕೆ ಕೀರ್ತಿ ಕಿರೀಟ ತೊಡಿಸಿದ ಚಾರ್ಲಿ777 ಸಿನಿಮಾ ನಿರ್ದೇಶಕ, ಚಾರ್ಲಿ ಖ್ಯಾತಿಯ ಕಿರಣನ ಬಾಲ್ಯ ಅರಳಿದ್ದು ಆತ ಸಾಂಸ್ಕೃತಿಕ, ಸಾಮಾಜಿಕ ಬದುಕಿಗೆ ಕಾಲೂರಿದ್ದು ಇದೇ ಗಡಿನಾಡ ಮಣ್ಣಿನಲ್ಲಿ.
“ಕಿರಣ ಕಾಸರಗೋಡಿನ ಮೊದಲ ಪರಿಪೂರ್ಣ ನಿರ್ದೇಶಕ. ಹಳ್ಳಿಯ ಗ್ರಾಮೀಣತೆಯ ನಡುವಿಂದ ಕನಸನೇರಿ ಹೊರಟವ. ಚಾರ್ಲಿಯಂತ ಸಿನಿಮಾ ಗೆಲುವು ಕಾಸರಗೋಡಿನ ಮತ್ಯಾರಿಗೂ ಒಲಿಯಲಿಲ್ಲ!
ಆತ ಬೆಳೆದುಬಂದ ಕಾಲದ ಹೆಜ್ಜೆ ಗುರುತುಗಳ ಚಿತ್ರಗಳ ಮಾಲೆ ಪೋಣಿಸಿದೆ.
ಅಂದ ಹಾಗೆ ಕಿರಣನ ಸಾಧನೆ ಸುಳ್ಯಕ್ಕೂ ಹೆಮ್ಮೆ.. ಕಿರಣನ ತಂದೆಯ ಊರು ಸುಳ್ಯ. ಕಾಸರಗೋಡಿನಂತೆ ಸುಳ್ಯದಲ್ಲಿಯೂ ಬಾಲ್ಯವನ್ನು ಕಳೆದ ಹುಡುಗ ಕಿರಣ ರಾಜ್..“