ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇಂದು ವಿಶ್ವಕಪ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ನಡೆಯಲಿದೆ.ಭಾರತ ಸೆಮಿಫೈನಲ್ ತಲುಪಲು ಮುಖ್ಯ ಪಾತ್ರ ವಹಿಸಿರುವ ಕೊಹ್ಲಿ ಏಳು ಪಂದ್ಯಗಳಲ್ಲಿ
ಒಂದು ಶತಕ 4 ಅರ್ಧ ಶತಕಗಳ ಮೂಲಕ 442 ರನ್ ಬಾರಿಸಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ವಿರಾಟ್ ಬ್ಯಾಟ್ನಿಂದ ಇಂದು ಒಂದು ಶತಕ ಬಂದರೆ ಸಚಿನ್ ಶತಕಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ. ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ. 2008ರಲ್ಲಿ 19 ವರ್ಷದ ವಯೋಮಿತಿಯ ವಿಶ್ವಕಪ್ನಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿಸಿದ ಕೊಹ್ಲಿ ನಂತರ ನೇರವಾಗಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಿದ್ದರು. ಇವರ ಕವರ್ ಡ್ರೈವ್ ಮತ್ತು ಫ್ಲಿಕ್ ಹೊಡೆತಗಳನ್ನು ನೋಡುವುದು ಕ್ರಿಕೆಟ್ ಪ್ರಿಯರ ಕಣ್ಣಿಗೆ ಹಬ್ಬ
2008ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರಾಟ್ ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ 111 ಪಂದ್ಯಗಳಿಂದ 8,676 ರನ್ಗಳನ್ನು ಬಾರಿಸಿ 49.3ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 13,525 ರನ್ಗಳನ್ನು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲೂ 4008 ರನ್ ಬಾರಿಸಿದ ಕೀರ್ತಿ ಕಿಂಗ್ ಕೊಹ್ಲಿ ಅವರದ್ದು.





