ಸುಳ್ಯ:ನೆರೆಯ ರಾಜ್ಯಗಳ ಮಧ್ಯೆ ಭಾಷಾ, ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಜೊತೆಗೆ ರಾಜಕೀಯ ಕೊಡುಕೊಳ್ಳುವಿಕೆಯೂ ಸಾಮಾನ್ಯ.
ಆ ರಾಜಕೀಯ ವಿನಿಮಯ ಚುನಾವಣಾ ಸಂದರ್ಭದಲ್ಲಿ ಅತೀ ಹೆಚ್ಚು ಕಂಡು ಬರುತ್ತುದೆ.ಕೇರಳದಲ್ಲಿ ಚುನಾವಣೆ ನಡೆದರೆ ಕರ್ನಾಟಕದ ನಾಯಕರು, ಕರ್ನಾಟಕದಲ್ಲಿ ಚುನಾವಣೆ ನಡೆದಲ್ಲಿ ಕೇರಳದ ನಾಯಕರು, ಕಾರ್ಯಕರ್ತರು ಕರ್ನಾಟಕದಲ್ಲಿ
ಚುನಾವಣಾ ಪ್ರಚಾರ ನಡೆಸುವುದು ಇದೀಗ ಸರ್ವೇ ಸಾಧಾರಣವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಲ್ಲಿನ ರಾಜಕೀಯ ಮುಖಂಡರು, ಕಾರ್ಯಕರ್ತರು ಇಲ್ಲಿ ಬಂದು ಮೊಕ್ಕಾಂ ಹೂಡಿ ಇಲ್ಲಿ ಚುನಾವಣಾ ಪ್ರಚಾರ ನಡೆಸುವುದು ಕಂಡು ಬರುತ್ತದೆ.
ಇದೀಗ ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಯಕರು, ಕಾರ್ಯಕರ್ತರು ಭಾಗವಹಿಸಿ ಕೇರಳದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಳೆದ 15-20 ದಿನಗಳಿಂದ ಕೇರಳ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ತ್ರಿಕ್ಕರಿಪುರ ಕ್ಷೇತ್ರದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಪ್ರಚಾರ
ಮುಖ್ಯವಾಗಿ ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಂದರೆ ಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿಯ ಮುಖಂಡರು, ಕಾರ್ಯಕರ್ತರು ತಂಡವಾಗಿ ಕೆಲವು ಪ್ರದೇಶಗಳನ್ನು ಆಯ್ಕೆ ಮಾಡಿ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮುಖ್ಯವಾಗಿ ಮಂಜೇಶ್ವರ, ಕಾಸರಗೋಡು, ಉದುಮ, ಕಾಂಞಂಗಾಡ್ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕಾಸರಗೋಡು, ಉದುಮ, ತ್ರಿಕ್ಕರಿಪುರ ಕ್ಷೇತ್ರಗಳಲ್ಲಿ ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ.

ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಪ್ರಚಾರ
ಬಿಜೆಪಿ ಪರವಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಾಜಿ ಸಚಿವ ಎಸ್.ಅಂಗಾರ ಮುಖಂಡರಾರ ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ, ಸುರೇಶ್ ಕಣೆಮರಡ್ಕ, ಬಾಲಕೃಷ್ಣ ಕೀಲಾಡಿ, ಬೂಡು ರಾಧಾಕೃಷ್ಣ, ಸುನಿಲ್ ಕೇರ್ಪಳ ಸೇರಿದಂತೆ ಹಲವು ಮಂದಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ರಮಾನಾಥ್ ರೈ, ಟಿ.ಎಂ.ಶಹೀದ್, ಶಾಫಿ ಕುತ್ತೆಮೊಟ್ಟೆ, ರಾಜು ಪಂಡಿತ್, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ.ಜಾನಿ ಕಲ್ಲುಗುಂಡಿ, ಜಿ.ಕೆ.ಹಮೀದ್, ಸಿದ್ದಿಕ್ ಕೊಕ್ಕೋ, ಶಹೀದ್ ಪಾರೆ ಸೇರಿದಂತೆ ಹಲವು ಮಂದಿ ಕೇರಳದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಹಲವು ಮಂದಿ ನಾಯಕರು ವಿವಿಧ ಕ್ಷೇತ್ರಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕೇರಳದ ಪ್ರಮುಖ ರಂಗಗಳಾದ ಯುಡಿಎಫ್, ಎನ್ಡಿಯ ಕೂಟಗಳ ಗೆಲುವಿನಲ್ಲಿ ಕರ್ನಾಟಕದ ಕಾರ್ಯಕರ್ತರ, ಮುಖಂಡರ ಕೊಡುಗೆಯೂ ಇರಲಿದೆ.









