ಕಡಬ: ಗದ್ದೆಗಳನ್ನು ಕಾಣಲು ಅಪರೂಪವಾಗಿರುವ ಇಂದಿನ ಕಾಲಘಟ್ಟದಲ್ಲಿ ಸಂಘ- ಸಂಸ್ಥೆಗಳು ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸಿ ಜನರನ್ನು ಮನರಂಜಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕೆಸರು ಗದ್ದೆ ಕ್ರೀಡಾಕೂಟಗಳು ಗದ್ದೆಗಳ ಉಳಿವಿಗೆ ಪೂರಕವಾಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಕಡಬ ತಾಲೂಕಿನ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲ ಆಶ್ರಯದಲ್ಲಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ
ಸಾಕೋಟೆಜಾಲು ದಿ.ಆರ್.ಸಾಂತಪ್ಪ ಗೌಡ ಅವರ ಗದ್ದೆಯಲ್ಲಿ ನಡೆದ ಎರಡನೇ ವರ್ಷದ ಕೆಸರ್ಡೊಂಜಿ ದಿನ ಕೆಸರು ಗದ್ದೆಯಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೆಸರು ಗದ್ದೆ ಕ್ರೀಡಾಕೂಟಗಳು ಜನತೆಗೆ ಹಿಂದಿನ ಕಾಲವನ್ನು ನೆನಪಿಸುವಂತೆ ಮಾಡುತ್ತದೆ ಎಂದರು.
ತುಳುನಾಡ ತುಡರ್ ಯುವಕ ಮಂಡಲ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆಜಾಲು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಜಾಲು, ಪಿಡಿಒ ಗುರುವ ಎಸ್., ತೆಗ್ರ್ ತುಳುಕೂಟ ಅಧ್ಯಕ್ಷ ವಾಸುದೇವ ಗೌಡ ಕೇಪುಂಜ, ಮಾತೃಶಕ್ತಿ ದುರ್ಗಾವಾಹಿನಿಯ ರಜಿತಾಪದ್ಮನಾಭ ಕೇಪುಂಜ, ಯುವಕ ಮಂಡಲದ ಗೌರವ ಸಲಹೆಗಾರರಾದ ಮೃತ್ಯುಂಜಯ ಭಿಡೆ ಕೆರೆತೋಟ, ಉಮೇಶ್ ಶೆಟ್ಟಿ ಸಾಯಿರಾಮ್, ಸಂಚಾಲಕ ಯಶೋಧರ ಜಾಲು, ಜಾಗದ ಮಾಲಕಿ ಚಂದ್ರಾವತಿ ಎಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶವಂತ ಕಲ್ಲುಗುಡ್ಡೆ ಸ್ವಾಗತಿಸಿದರು. ಆಶಿಶ್ ಕಲ್ಲುಗುಡ್ಡೆ ವಂದಿಸಿದರು. ಸಂದೇಶ್ ಮೀನಾಡಿ ನಿರೂಪಿಸಿದರು.
ಗೌರವಾರ್ಪಣೆ;
ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ, ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ದೀಕ್ಷಿತಾ ಎಳುವಾಲೆ, ಪುರುಷೋತ್ತಮ ಸಂಕೇಶ, ನವೀನ್ ಸೇರಿದಂತೆ ಹಲವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳು;
ಕೆಸರು ಗದ್ದೆಯಲ್ಲಿ ಓಟ, ಹಾಳೆ ಎಳೆತ, ಹಗ್ಗ ಜಗ್ಗಾಟ, ಕಬಡ್ಡಿ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ಪ್ರಥಮ, ವನಚಾಮುಂಡೇಶ್ವರಿ ಅಸಂತಡ್ಕ ದ್ವಿತೀಯ, ಮಹಿಳೆಯ ಹಗ್ಗ ಜಗ್ಗಾಟದಲ್ಲಿ ಒಕ್ಕಲಿಗ ಸಂಘ ಕಡಬ ಪ್ರಥಮ, ಮಹಾವಿಷ್ಣು ಮರ್ದಾಳ ದ್ವಿತೀಯ, ಪುರುಷರ ಕಬಡ್ಡಿಯಲ್ಲಿ ತುಳುನಾಡ ಅಪ್ಪೆನ ಜೋಕುಲು ಪ್ರಥಮ, ವಿಷ್ಣು ಅರ್ಥ್ ಮೂವರ್ಸ್ ಮರ್ದಾಳ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಸುರೇಶ್ ಪಡಿಪಂಡ ಕ್ರೀಡಾಸ್ಪರ್ಧೆಗಳನ್ನು ನಿರೂಪಿಸಿದರು.
ಉದ್ಘಾಟನೆ;
ಬೆಳಗ್ಗೆ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಅರ್ಚಕೆ ಕೃಷ್ಣ ಹೆಬ್ಬಾರ್ ಉದ್ಘಾಟಿಸಿದರು. ದೈವಸ್ಥಾನದ ಪರಿಚಾರಕ ವಿಜಯಕುಮಾರ್ ಕೇಪುಂಜ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ರೆಂಜಿಲಾಡಿ ಮಾತೃಶಕ್ತಿ ದುರ್ಗಾವಾಹಿನಿ ತಂಡದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.